ಕೋಟ : ಮನೆಯಲ್ಲಿ ವೃದ್ಧೆ ಮಾತ್ರ ಇರುವ ವೇಳೆ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ಅವರೊಂದಿಗೆ ಮನೆಯವರಂತೆ ಮಾತನಾಡಿ ಆಕೆಯ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರಿನಲ್ಲಿ ಮಾ.20ರಂದು ನಡೆದಿದೆ. ರುದ್ರಮ್ಮ(92) ಚಿನ್ನ ಕಳೆದುಕೊಂಡಿರುವ ವೃದ್ಧೆ.
ಮಾ.20ರಂದು ಮನೆಯವರೆಲ್ಲರೂ ಸ್ಥಳೀಯ ಕೊಟ್ಟೂರು ದೇಗುಲದ ಜಾತ್ರೆಗೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ರುದ್ರಮ್ಮ ಒಬ್ಬರೇ ಇದ್ದರು. ದಿನನಿತ್ಯದಂತೆ ಅವರು ಮಲಗುವಾಗ ತಾನು ಧರಿಸಿದ್ದ ಚಿನ್ನದ ಸರವನ್ನು ಮಂಚದ ಮೇಲೆ ಕಳಚಿಟ್ಟಿದ್ದರು. ಜಾತ್ರೆಗೆ ತೆರಳಿದ್ದ ಅವರ ಅಳಿಯ ಶ್ರೀಧರ್ ಅವರು ದಿಢೀರನೇ ಮನೆಗೆ ಬಂದಿದ್ದು, ಈ ವೇಳೆ ಮನೆಯ ಬಾಗಿಲು ಒಡೆದಿರುವುದು ಕಂಡುಬಂದಿದೆ.
ಈ ಬಗ್ಗೆ ರುದ್ರಮ್ಮರನ್ನು ಶ್ರೀಧರ್ ಅವರು ವಿಚಾರಿಸಿದಾಗ “ಯಾರೋ ಹುಡುಗ ಬಂದಿದ್ದ. ನನಗೆ ದೃಷ್ಟಿ ದೋಷವಿರುವುದರಿಂದ ಯಾರೆಂದು ತಿಳಿಯಲಿಲ್ಲ. ನಾನು ನೀವೇ ಬಂದಿರಬಹುದು ಎಂದು ಜಾತ್ರೆ ಮುಗಿಯಿತಾ? ಹೇಗಾಯಿತು ಎಂದು ಆತನಲ್ಲಿ ಕೇಳಿದ್ದೆ. ಆತನೂ ಮನೆಯವರಂತೆಯೇ ಮಾತನಾಡಿದ್ದ” ಎಂದು ತಿಳಿಸಿದ್ದರು. ಆಗ ಅನುಮಾನಗೊಂಡ ಶ್ರೀಧರ್ ಅವರು ಪರಿಶೀಲಿಸಿದಾಗ 30 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ತಿಳಿದುಬಂದಿದೆ.
ಮನೆಯಲ್ಲಿರುವ ಎಲ್ಲ ಚಿನ್ನಾಭರಣಗಳನ್ನು ಕದಿಯುವ ಉದ್ದೇಶದಿಂದ ಕಳ್ಳ ಮನೆಗೆ ನುಗ್ಗಿರುವ ಸಾಧ್ಯತೆ ಇದ್ದು, ಶ್ರೀಧರ್ ದಿಢೀರನೆ ಮನೆಗೆ ಮರಳಿದ್ದರಿಂದ ಕೈಗೆ ಸಿಕ್ಕ ಸರವೊಂದನ್ನು ಮಾತ್ರ ಕದ್ದು ಪರಾರಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲವಾದಲ್ಲಿ ಮನೆಯಲ್ಲಿದ್ದ ಉಳಿದ ಚಿನ್ನಾಭರಣಗಳನ್ನು ಕಳ್ಳ ಕದ್ದೊಯ್ಯುವ ಸಾಧ್ಯತೆಯಿತ್ತು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.