ಜಾತಿ ನಿಂದನೆ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ

ಪಡುಬಿದ್ರಿ : ಪರಿಶಿಷ್ಟ ಜಾತಿಯ ಗೋವಿಂದ ಎಂಬವರಿಗೆ 2016ರಲ್ಲಿ ಕಂಚಿನಡ್ಕದ ಕೆಎಫ್‌ಸಿ ವಾಲಿಬಾಲ್ ಆಟದ ಮೈದಾನದ ಬಳಿ ಮಹಮ್ಮದ್‌ ಅಶ್ರಫ್ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ತಪ್ಪಿತಸ್ಥ ಎಂದು ತಿರ್ಮಾನಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವ‌ರ್ ತೀರ್ಪು ನೀಡಿದ್ದಾರೆ.

ಘಟನೆಯ ದಿನ ಆರೋಪಿ ತನ್ನ ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಮೈದಾನಕ್ಕೆ ಬಂದಾಗ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆರೋಪಿಯು ಜಾತಿ ನಿಂದನೆ ಮಾಡಿ ಕೈಯಲ್ಲಿ ಧರಿಸಿದ್ದ ಕಬ್ಬಿಣದ ಪಂಚ್‌ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದನು. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಕಾರ್ಕಳ ಉಪ ವಿಭಾಗದ ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕ ಡಾ| ಸುಮನ್ ಡಿ. ಪಿ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕ ಕಲಂ 324ರ ಅಡಿ ಆರೋಪಿಗೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಕಲಂ 504ರಡಿ 3 ತಿಂಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಕಲಂ 506ರಡಿ 6 ತಿಂಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಎಸ್‌ಸಿ, ಎಸ್‌ಟಿ ಕಾಯ್ದೆಯಡಿಯ ಅಪರಾಧಕ್ಕೆ 1ವರ್ಷ ಸಾದಾ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪಿತ್ತಿದ್ದಾರೆ. ದಂಡದ ಮೊತ್ತದಲ್ಲಿ 20 ಸಾವಿರ ರೂ. ಗಳನ್ನು ಪರಿಹಾರ ರೂಪದಲ್ಲಿ ಗೋವಿಂದ ಅವರಿಗೆ ನೀಡಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ಅವರು ವಾದಿಸಿದ್ದರು.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಎರಡು ಕಾರುಗಳ ನಡುವೆ ಅಪಘಾತ : ನಾಲ್ವರಿಗೆ ಗಾಯ..!

ಬಜೆಟ್‌ನಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಎಸ್‌‌ಡಿ‌ಪಿ‌ಐ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ