ತಮ್ಮನನ್ನು ಹತ್ಯೆ ಮಾಡಿದ ಅಣ್ಣನಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಜಮೀನಿನಲ್ಲಿ ಪಾಲು ಕೇಳಲು ಮನೆಗೆ ಬಂದಿದ್ದ ತನ್ನ ಮ್ಮನನ್ನೇ ಹೊಡೆದು ಕೊಲೆ ಮಾಡಿದ್ದ ಅಪರಾಧಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್.ಜಿ. ಅವರು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ (45) ಶಿಕ್ಷೆಗೊಳಗಾದವನು. ಈತನು ತನ್ನ ತಮ್ಮ ಬಾಳಪ್ಪ ಯಾನೆ ರಾಮ ನಾಯ್ಕ (35) ಎಂಬವನನ್ನು ಹತ್ಯೆಗೈದಿದ್ದನು.

ಪ್ರಕರಣದ ವಿವರ

2022ರ ಮೇ 10ರಂದು ಕನ್ಯಾನ ಗ್ರಾಮದ ನಂದರಬೆಟ್ಟುವಿನಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಪೂಜೆ ಇದ್ದ ಕಾರಣ ಬಾಳಪ್ಪ ನಾಯ್ಕ ಅಲ್ಲಿಗೆ ಬಂದಿದ್ದರು. ಅಲ್ಲಿಯೇ ಪಕ್ಕದಲ್ಲಿ ತನ್ನ ಕುಟುಂಬದ ಮನೆ ಇತ್ತು. ಅಲ್ಲಿ ಅಣ್ಣ ಐತಪ್ಪ ನಾಯ್ಕ ನೆಲೆಸಿದ್ದನು. ಹಾಗಾಗಿ ಬಾಳಪ್ಪ ನಾಯ್ಕ ಅಲ್ಲಿಗೆ ಹೋಗಿದ್ದ ವೇಳೆ ಅಲ್ಲಿ ಜಮೀನಿನ ವಿಚಾರವಾಗಿ ಮಾತುಕತೆ ನಡೆದು ಪಾಲಿನ ವಿಷಯವು ಪ್ರಸ್ತಾಪ ಮಾಡಿದ್ದಾರೆ. ಆಗ ಕ್ರೋಧಗೊಂಡ ಆರೋಪಿ ಐತಪ್ಪ ನಾಯ್ಕ ಮನೆಯಲ್ಲಿದ್ದ ಮರದ ನೊಗದಿಂದ ಬಾಳಪ್ಪ ನಾಯ್ಕ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದನು. ಇದರಿಂದ ಬಾಳಪ್ಪ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ತನಿಖಾಧಿಕಾರಿಯಾಗಿದ್ದ ವಿಟ್ಲ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ. ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 17 ಮಂದಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪೈಕಿ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ| ವರ್ಷಾ ಎ. ಶೆಟ್ಟಿ ಹಾಗೂ ಎಫ್‌ಎಸ್ಎಲ್ ಅಧಿಕಾರಿ ಡಾ| ಗೀತಾಲಕ್ಷ್ಮೀ ಅವರ ಸಾಕ್ಷ್ಯವು ಪ್ರಮುಖವಾಗಿತ್ತು.

ನ್ಯಾಯಾಧೀಶೆ ಸುನೀತಾ ಎಸ್.ಜಿ. ಅವರು ಆರೋಪಿಗೆ ಜೀವಾವಧಿ ಶಿಕ್ಷೆ 50,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 10,000 ರೂ.ಗಳನ್ನು ಸರಕಾರಕ್ಕೆ ಉಳಿದ ಮೊತ್ತವನ್ನು ಕೊಲೆಯಾದ ಬಾಳಪ್ಪ ಅವರ ತಾಯಿಗೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ ಬಾಳಪ್ಪ ಅವರ ತಾಯಿಗೆ ಗರಿಷ್ಠ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ್ ವಾದಿಸಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ