ಬಿಲ್ ಮಂಜೂರಾತಿಗೆ ಲಂಚ : ರೆಡ್ ಹ್ಯಾಂಡ್‌ ಆಗಿ ಕಿನ್ನಿಗೋಳಿ ಪಪಂ ಜೂನಿಯರ್ ಇಂಜಿನಿಯರ್, ಪಪಂ ಮುಖ್ಯಾಧಿಕಾರಿ ‘ಲೋಕಾ’ ಬಲೆಗೆ

ಮಂಗಳೂರು : ಗುತ್ತಿಗೆ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಪಡೆಯುತ್ತಿರುವಾಗಲೇ ಕಿನ್ನಿಗೋಳಿ ಪಪಂ ಜೂನಿಯರ್ ಇಂಜಿನಿಯರ್, ಪಪಂ ಮುಖ್ಯಾಧಿಕಾರಿ ರೆಡ್ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ‌.

ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರೊಬ್ಬರು 2022-23ನೇ ಸಾಲಿನ 5ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಗೆ ಕಾಮಗಾರಿಗೆ ಗುತ್ತಿಗೆ ಕೆಲಸ ನಿರ್ವಹಿಸಿದ್ದರು. ಕಾಮಗಾರಿಯ 9,77,154 ರೂ. ಮೊತ್ತದ ಬಿಲ್ ಮಂಜೂರಾತಿಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜುವಲ್ಲಿ ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರು ವಿಚಾರಿಸಿದ್ದಾರೆ. ಈ ವೇಳೆ ಬಿಲ್ ಪಾಸ್ ಮಾಡಲು ತನಗೆ 37,000 ರೂ. ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗೆ 15,000 ರೂ. ಲಂಚವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಜೂನಿಯರ್ ಇಂಜಿನಿಯರ್ ನಾಗರಾಜು ಮುಂಚಿತವಾಗಿ 7000 ರೂ. ಹಣ ಪಡೆದಿದ್ದರು.

ಉಳಿದ ಲಂಚದ ಮೊತ್ತವಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು 30,000 ರೂ. ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ 15,000 ರೂ. ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ‌ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್‌ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಠಾಣಾ ಉಪಾಧೀಕ್ಷಕಿ ಡಾ.ಗಾನ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್., ಚಂದ್ರಶೇಖರ್ ಸಿ.ಎಲ್. ಸಿಬ್ಬಂದಿಯೊಂದಿಗೆ ಟ್ರ್ಯಾಪ್ ಮಾಡಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !