ಬಾಲಕ ನಾಪತ್ತೆ ಪ್ರಕರಣ – ಶನಿವಾರ ಫರಂಗಿಪೇಟೆ ಬಂದ್‌ಗೆ ಕರೆ…

ಬಂಟ್ವಾಳ : ಇಲ್ಲಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಫೆ.27ರ ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಮುಂದಿನ‌ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು. ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಎಡಿಷನಲ್ ಎಸ್.ಪಿ. ರಾಜೇಂದ್ರ ಅವರ ಜೊತೆ ಪ್ರತಿಭಟನಕಾರರು ಮಾತುಕತೆ ನಡೆಸಿದರು.

ಬಳಿಕ ಫರಂಗಿಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಮಾ.1 ರಂದು ಶನಿವಾರ ಬೆಳಗ್ಗಿನಿಂದ ಫರಂಗಿಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು.

ಈ ಪ್ರತಿಭಟನೆ ಯಶಸ್ವಿಯಾಗಲು ಎಲ್ಲಾ ಸಂಘ ಸಂಸ್ಥೆಗಳು, ಸ್ಥಳೀಯ 6 ಗ್ರಾಮಗಳ ಗ್ರಾಮಸ್ಥರು, ವ್ಯಾಪಾರಿಗಳು, ಸಹಕಾರ ನೀಡುವಂತೆ ಕೋರಲಾಯಿತು.

ಈ ಸಂದರ್ಭ ಪ್ರಮುಖರಾದ ಭರತ್ ಕುಮ್ಡೇಲು, ಉಮೇಶ್ ಶೆಟ್ಟಿ ಬರ್ಕೆ, ಪ್ರಸಾದ್ ಕುಮಾರ್, ಮನೋಜ್ ಆಚಾರ್ಯ ನಾಣ್ಯ, ಪದ್ಮನಾಭ ಶೆಟ್ಟಿ ಕಿದೆಬೆಟ್ಟು, ಧನರಾಜ್, ಚಂದ್ರಶೇಖರ ಗಾಂಭೀರ ಮತ್ತಿತರರು ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ