ದೋಣಿ ಅಪಘಾತ – ಅಪಾಯದಿಂದ ಪಾರಾದ ಮೀನುಗಾರರು

ಉಳ್ಳಾಲ : ಮೀನುಗಾರಿಕೆ ನಡೆಸಿ ಮರಳುತ್ತಿದ್ದಾಗ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಗಿಲ್‌ನೆಟ್‌ ನಾಡದೋಣಿ ಮಗುಚಿಬಿದ್ದು, ಬಲೆ ಮತ್ತು ಮೀನು ಸಮುದ್ರಪಾಲಾಗಿದೆ. ದೋಣಿಯಲ್ಲಿದ್ದ ಮೂವರು ಮೀನುಗಾರರು ಪಾರಾಗಿದ್ದಾರೆ.

ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಕಲ್ಲಾಪು ನಿವಾಸಿ ಮೊಯಿದ್ದೀನ್‌ ಅವರು ಕ್ರಿಸ್ತಿಯಾ ಗೋರ್ಬನ್‌ ನವಾಝ್ ಹೆಸರಿನ ತಮ್ಮ ನಾಡದೋಣಿಯಲ್ಲಿ ಮಹಮ್ಮದ್‌ ಅಮೀರ್‌ ಸುಹೈಲ್‌, ಅಬ್ದುಲ್‌ ಹಮೀದ್‌ ಮುಡಿಪೊಡಿ ಜತೆಯಲ್ಲಿ ಉಳ್ಳಾಲದ ಕೋಟೆಪುರದಿಂದ ಅಳಿವೆಬಾಗಿಲು ಮೂಲಕ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು.

ಮೀನುಗಾರಿಕೆ ನಡೆಸಿ ಹಳೆಬಂದರು ಮೀನುಗಾರಿಕೆ ದಕ್ಕೆಗೆ ಮರಳುತ್ತಿದ್ದಾಗ ಉಳ್ಳಾಲದಿಂದ ಸುಮಾರು 5 ನಾಟಿಕಲ್‌ ಮೈಲು ದೂರದಲ್ಲಿದ್ದಾಗ ವಿಪರೀತ ಗಾಳಿಯಿಂದಾಗಿ ಸಮುದ್ರದ ಅಲೆಗಳು ಜೋರಾದ ಕಾರಣ ದೋಣಿ ಮಗುಚಿ ಬಿದ್ದಿದೆ.

ಘಟನೆ ನಡೆದಾಗ ದೋಣಿ ಚಲಾಯಿಸುತ್ತಿದ್ದ ಮೊಯಿದ್ದೀನ್‌ ಹಾಗೂ ಇಬ್ಬರು ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದಾರೆ. ಬಳಿಕ ಈಜಿ ದೋಣಿಯನ್ನು ಯಥಾಸ್ಥಿತಿಗೆ ತಂದು ಸುರಕ್ಷಿತವಾಗಿ ದಡ ಸೇರಿದ್ದಾರೆ. ಘಟನೆಯಲ್ಲಿ 1.25 ಲಕ್ಷ ರೂ. ಮೌಲ್ಯದ ಮೀನಿನ ಬಲೆ ಹಾಗೂ ದೋಣಿಯಲ್ಲಿದ್ದ ಸುಮಾರು 35 ಸಾವಿರ ರೂ. ಮೌಲ್ಯದ ವಿವಿಧ ರೀತಿಯ ಮೀನುಗಳು ಸಮುದ್ರ ಪಾಲಾಗಿದ್ದು ಒಟ್ಟು 1.60 ಲಕ್ಷ ರೂ. ನಷ್ಟ ಉಂಟಾಗಿದೆ.

ಈ ಬಗ್ಗೆ ತಣ್ಣೀರುಬಾವಿ ಬೆಂಗ್ರೆ ಮಂಗಳೂರು ಕರಾವಳಿ ಕಾವಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ