ಮಂಗಳೂರು ಪಾಲಿಕೆಯಲ್ಲಿ ಬಿಜೆಪಿ‌ಯ 4 ವರ್ಷದ ಆಡಳಿತ ಸಂಪೂರ್ಣ ವೈಫಲ್ಯ : ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ

ಮಂಗಳೂರು : ಮಂಗಳೂರು ಮಹಾ‌ನಗರ ಪಾಲಿಕೆಯಲ್ಲಿ ಬಿಜೆಪಿ 4 ವರ್ಷದ ಆಡಳಿತ ಸಂಪೂರ್ಣ ವೈಫಲ್ಯವಾಗಿದೆ. ಸಾರ್ವಜನಿಕರಿಗೆ ನೀರಿನ ದರ, ಮನೆ ತೆರಿಗೆ, ಘನ ತ್ಯಾಜ್ಯ ವಿಲೇವಾರಿ ತೆರಿಗೆ, ಸ್ಮಾರ್ಟ್ ಸಿಟಿ ಕಾಮಗಾರಿಗಳು, ಜಲಸಿರಿ ಯೋಜನೆ, ಬಡವರ ಆಶ್ರಯ ಯೋಜನೆ ಸಂಪೂರ್ಣ ವೈಫಲ್ಯವಾಗಿದೆ ಎಂದು‌ ಮನಪಾ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮ.ನ.ಪಾ‌ದಲ್ಲಿ ತಿಂಗಳಿಗೆ ಒಂದು ಸಾಮಾನ್ಯ ಸಭೆ ನಡೆಸುವಂತದ್ದು ಕಡ್ಡಾಯ. ನಾಡಗೀತೆ ಆದ ತಕ್ಷಣ ಹಿಂದಿನ ಪರಿಷತ್ತು ಸಭೆಯ, ನಾಲ್ಕು ಸ್ಥಾಯಿ ಸಮಿತಿಗಳ ನಡವಳಿಗಳ ಮತ್ತು ನಿರ್ಣಯಗಳನ್ನು ಮೇಯರ್‌ರವರು ಮಾಡಿದ ತಕ್ಷಣ ಕೆ.ಎಂ.ಸಿ ಕಾಯಿದೆ ಮತ್ತು ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ಕಲ್ಪಿಸಬೇಕಾಗಿರುತ್ತದೆ. ಇದರ ಬದಲು ಮೇಯರ್‌ರವರು ತಮ್ಮ ಆಡಳಿತದ ಅವಧಿಯಲ್ಲಿ ಮಾಡಿರತಕ್ಕಂತಹ ಸಾಧನೆಗಳನ್ನು ತಿಳಿಸುವಂತಹ ವರದಿಯನ್ನು ಸಲ್ಲಿಸಿದ್ದು ಆ ಸಂಧರ್ಭದಲ್ಲಿ ನಾನು ಪ್ರತಿಪಕ್ಷ ನಾಯಕನಾಗಿ ಅವರು ನಿಜವಾಗಿಯೂ ಸಾಧನೆ ಮಾಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಅಂಕಿ ಅಂಶಗಳನ್ನು ಮತ್ತು ದಾಖಲೆಗಳನ್ನು ಇಟ್ಟು ಮಾತನಾಡುವಂತಹ ಸಂಧರ್ಭದಲ್ಲಿ ಮೇಯರ್‌ರವರು ಇದಕ್ಕೆ ಅಡ್ಡಿಯನ್ನು ಉಂಟುಮಾಡಿರುತ್ತಾರೆ. ಪ್ರತಿಪಕ್ಷ ನಾಯಕನಾಗಿ ಎಲ್ಲಾ ಸಾಮಾನ್ಯ ಸಭೆಗಳಲ್ಲೂ ನನ್ನ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದೇನೆ. ಆದರೆ ಮೇಯರ್‌ರವರು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಮತ್ತು ಪ್ರಚಾರವನ್ನು ಪಡೆಯುವ ಆಸಕ್ತಿ ತೋರಿದ್ದಾರೆ ಮತ್ತು ಯಾವುದೇ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಆಡಳಿತ ನಡೆಸಿಲ್ಲ ಎಂದು ಆರೋಪಿಸಿದರು.

ಮೇಯರ್‌ರವರು ನಾನು ಚರ್ಚೆ ಆರಂಭಿಸುತ್ತಿದ್ದಂತೆಯೇ ನನ್ನ ಮಾತಿಗೆ ಅಡ್ಡಿಪಡಿಸಿ ಪ್ರತಿಪಕ್ಷದ ಹಕ್ಕನ್ನು ಮೊಟಕುಗೊಳಿಸಿ ತನ್ನದೇ ಪಕ್ಷದ ಸದಸ್ಯರಿಗೆ ಅವರ ವರದಿಯ ಬಗ್ಗೆ ಅಭಿನಂದನೆಗಳನ್ನು ಹೇಳಲು ಅವಕಾಶ ನೀಡಿ ಪ್ರತಿಪಕ್ಷದ ಎಲ್ಲಾ ಸದಸ್ಯರಿಗೆ ಅಗೌರವವನ್ನು ತೋರಿದ್ದಾರೆ. ಮಾತ್ರವಲ್ಲದೇ ಮಹಾನಗರ ಪಾಲಿಕೆಯಲ್ಲಿ ನಡೆದುಬಂದಂತಹ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ. ಇದಕ್ಕೆ ನಾವು ಪ್ರತಿಭಟಿಸಿ ಬಾವಿಗೆ ಇಳಿದ ಸಂಧರ್ಭ ಆಡಳಿತ ಪಕ್ಷದ ಸದಸ್ಯರನ್ನು ಕೂಡ ಬಾವಿಗೆ ಇಳಿಯಲು ಅವಕಾಶ ನೀಡಿದ್ದು, ಇದು ಇತಿಹಾಸದ ಪುಟಕ್ಕೆ ಸೇರಿದ್ದು, ತಲೆ ತಗ್ಗಿಸುವಂತಹ ಕೆಲಸವಾಗಿರುತ್ತದೆ ಎಂದರು.

ನೀರಿನ ಬಿಲ್ಲಿನ ಹೆಚ್ಚಳ ಮತ್ತು ನೀರಿನ ಬಿಲ್ಲಿನ ಪಾವತಿ ಸಮಸ್ಯೆಗಳು, ಸ್ವಯಂಘೋಷಿತ ಅಸ್ತಿತೆರಿಗೆ ಹೆಚ್ಚಳ, ಘನತ್ಯಾಜ್ಯ ತೆರಿಗೆ ಹೆಚ್ಚಳ, ಉದ್ದಿಮೆ ಪರವಾನಗಿ ತೆರಿಗೆ ಹೆಚ್ಚಳ, 930 ಬಡಕುಟುಂಬಗಳಿಗೆ ಕೊಡತಕ್ಕಂತಹ ಆಶ್ರಯ ಯೋಜನೆಯ ವೈಫಲ್ಯ, ನಗರದ ಸ್ವಚ್ಚತೆಯ ವೈಫಲ್ಯ, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗಳು. ಒಳಚರಂಡಿ ಸಮಸ್ಯೆ. ಒಳಚರಂಡಿ ನೀರಿನ ಸಂಸ್ಕರಣಾ ಘಟಕದ ಸಮಸ್ಯೆ ಇದರಿಂದ ಜೀವನಾಡಿ ಫಲ್ಗುಣಿ ಮತ್ತು ಶಾಂಭವಿ ನದಿಗೆ ಒಳಚರಂಡಿ ನೀರಿನ ಹರಿವು, ಜಲಸಿರಿ ಯೋಜನೆ ಕಾಮಗಾರಿ ವೈಫಲ್ಯ, ಗೇಲ್ ಗ್ಯಾಸ್ ಕಾಮಗಾರಿಯಿಂದ ನಗರದ ಸಂಪೂರ್ಣ ರಸ್ತೆಗಳು ಹದಗೆಟ್ಟ ವಿಚಾರ, ಮಾರ್ಕೆಟ್ ಗಳ ಸಮಸ್ಯೆ, ತಿಂಗಳೊಂದರಂತೆ ಮಾಡಬೇಕಾದ ಟ್ರಾಫಿಕ್ ಸಭೆಯನ್ನು ಮೇಯರ್‌‌‌ರವರು ಅಧ್ಯಕ್ಷತೆಯಲ್ಲಿ ನಡೆಸಬೇಕಾಗಿದ್ದರೂ ಕಾಟಾಚಾರಕ್ಕೆ ಎರಡು ಸಭೆಯನ್ನು ಮಾಡಿದ್ದರೂ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸುಮಾರು 1 ಸಾವಿರ ಕೋಟಿ ಹಣವನ್ನು ಸ್ಮಾರ್ಟ್ ಸಿಟಿ ಯೋಜನೆಯ ಹೆಸರಲ್ಲಿ ಯಾವುದೇ ದೂರಾಲೋಚನೆ ಇಲ್ಲದೆ ಮಾಡಿದ್ದು, ಈ ಯೋಜನೆ ಸಂಪೂರ್ಣವಾಗಿ ವೈಫಲ್ಯವಾಗಿದ್ದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವೈಫಲ್ಯವಾಗಿದೆ. ಈ ರೀತಿ ಅನೇಕ ಸಮಸ್ಯೆಗಳ ಆಗರ ಬಿಜೆಪಿ ಆಡಳಿತದಲ್ಲಿ ಮಂಗಳೂರು ನಗರ ಪಾಲಿಕೆ ಆಗಿರುತ್ತದೆ ಎಂದು ಹೇಳಿದರು.

ಕೇಂದ್ರದಲ್ಲಿ, ರಾಜ್ಯದಲ್ಲಿ ಮತ್ತು ಮ.ನ.ಪಾ ದಲ್ಲಿ ಬಿಜೆಪಿ ಆಡಳಿತ ಇದ್ದಂತಹ ಸಂಧರ್ಭದಲ್ಲಿ ಮ.ನ.ಪಾ ನಾಗರಿಕರಿಗೆ ಅನುಕೂಲವಾಗುವಂತಹ ಯಾವುದೇ ಒಂದು ಹೊಸ ಯೋಜನೆಯನ್ನು ತರಲು ಎಲ್ಲಾ ಮೇಯರ್‌ಗಳು ಕಳೆದ 4 ವರ್ಷದ ಅವಧಿಯಲ್ಲಿ ವೈಫಲ್ಯವನ್ನು ಕಂಡಿದ್ದಾರೆ. ಸ್ವಯಂಘೋಷಿತ ಆಸ್ತಿ ತೆರಿಗೆ ಇವರ ಅವಧಿಯಲ್ಲೇ 5ರಿಂದ 6 ಪಟ್ಟು ಹೆಚ್ಚಿಸಿದ್ದು, ಅಂಗಳಕ್ಕೆ ಕೂಡ ತೆರಿಗೆಯನ್ನು ವಿಧಿಸಿದ ಶ್ರೇಯಸ್ಸು ಬಿಜೆಪಿ ಆಡಳಿತಕ್ಕೆ ಸೇರುತ್ತದೆ ಎಂದರು.

ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಿದ ವಿಪಕ್ಷ ನಾಯಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿ ಪರಿಷತ್ತು ಸಭೆಯಲ್ಲಿ ಜನರ ಧ್ವನಿಯಾಗಿ ನಮ್ಮ ಎಲ್ಲಾ ಕಾರ್ಪೋರೇಟರ್‌ಗಳು ಒಕ್ಕೊರಲಿನಿಂದ ಪ್ರತಿಭಟನೆ ಮಾಡಿದ ಪ್ರಯುಕ್ತ ಆಸ್ತಿ ತೆರಿಗೆ ಕಡಿಮೆ ಮಾಡುವ ನಿರ್ಣಯವನ್ನು ಪರಿಷತ್ತು ಸಭೆಗೆ ತಂದಿದ್ದು, ಅದಕ್ಕೆ ನಾವು ಬೆಂಬಲವನ್ನು ಸೂಚಿಸಿದ್ದೆವು. ಆದರೂ ಕೂಡ ಇದರ ಬಗ್ಗೆ ಸಭೆ ನಡೆಸಿ ಕೂಡಲೇ ಕಡಿಮೆ ಮಾಡುವ ಬದಲು ಅದನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟಿದ್ದಾರೆ ಎಂದರು.

ಕಾರ್ಪೋರೇಟರ್‌‌ಗಳ ಲೋಕಲ್ ಏರಿಯ ಡೆವಲಪ್‌ಮೆಂಟ್ ನಿಧಿ ಅನುದಾನ ನೀಡದೇ ಕಾರ್ಪೋರೇಟರ್‌ಗಳು ಅವರ ವಾರ್ಡಿನ ಕೆಲಸ ಕಾರ್ಯ ಮಾಡಲು ತೊಂದರೆ ಉಂಟಾಗಿರುತ್ತದೆ. ಒಟ್ಟಾರೆಯಾಗಿ ಆರ್ಥಿಕವಾಗಿ ಮಂಗಳೂರು ಮಹಾನಗರ ಪಾಲಿಕೆ ದಿವಾಳಿ ಆಗಿರುತ್ತದೆ. ಕೂಡಲೇ ಮೇಯರ್‌ರವರು ಇದರ ಬಗ್ಗೆ ಶ್ವೇತ‌ಪತ್ರ‌ವನ್ನು ಹೊರಡಿಸಬೇಕೆಂದು ಆಗ್ರಹಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ