ಎಂಎಲ್‌ಸಿ ಐವಾನ್ ಡಿಸೋಜ ಮೇಲೆ ಎಫ್ಐಆರ್‌‌ಗೆ ಬಿಜೆಪಿ ಯುವಮೋರ್ಚಾ 24ಗಂಟೆಯ ಗಡುವು

ಮಂಗಳೂರು : ದೇಶವಿರೋಧಿ ಹೇಳಿಕೆ ಆರೋಪದಲ್ಲಿ ಎಂಎಲ್‌ಸಿ ಐವಾನ್ ಡಿಸೋಜ ಮೇಲೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಯುವಮೋರ್ಚಾ ಪೊಲೀಸರಿಗೆ ಮತ್ತೆ 24ಗಂಟೆಯ ಗಡುವು ನೀಡಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಐವಾನ್ ಡಿಸೋಜ ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದ್ದರಿಂದ ಐವಾನ್ ವಿರುದ್ಧ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಬರ್ಕೆ ಠಾಣೆಯಲ್ಲಿ ಸೋಮವಾರ ಸಂಜೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಿ ಹಿಂಬರಹ ನೀಡಿದ್ದರು. ಇಲ್ಲಿಯವರೆಗೆ ಎಫ್ಐಆರ್‌ ದಾಖಲಾಗಿರಲಿಲ್ಲ. ಆದ್ದರಿಂದ ನಂದನ್ ಮಲ್ಯ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಬರ್ಕೆ ಠಾಣೆಗೆ ಮುತ್ತಿಗೆ ಹಾಕಲು ನಿರ್ಧರಿಸಿತ್ತು.

ಅದರಂತೆ ಬರ್ಕೆ ಠಾಣೆಯ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನಾಲ್ಕು ಕೆಎಸ್ಆರ್‌ಪಿ ಬಸ್ ನಿಯೋಜಿಸಲಾಗಿತ್ತು. ಆದರೆ ಯುವಮೋರ್ಚಾ ಕೊನೆಯ ಕ್ಷಣದಲ್ಲಿ ಮುತ್ತಿಗೆಯನ್ನು ಕೈಬಿಟ್ಟು ಮಾತುಕತೆಗೆ ಮುಂದಾಗಿತ್ತು. ಕೆಲವೇ ಕೆಲವು ಯುವಮೋರ್ಚಾ ಕಾರ್ಯಕರ್ತರೊಂದಿಗೆ ಠಾಣೆಗೆ ಆಗಮಿಸಿದ ನಂದನ್ ಮಲ್ಯರು, ಎಸಿಪಿ ಪ್ರತಾಪ್ ಸಿಂಗ್ ಥೋರಟ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಐವಾನ್ ಡಿಸೋಜ ಮೇಲೆ ಎಫ್ಐಆರ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿಂಬರಹ ನೀಡಿದ್ದಾರೆ. ಆದ್ದರಿಂದ ನಾಳೆ ಸಂಜೆಯೊಳಗೆ ಎಫ್ಐಆರ್ ದಾಖಲಾಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸೋದಾಗಿ ಬಿಜೆಪಿ ಯುವಮೋರ್ಚಾ ಎಚ್ಚರಿಕೆ ನೀಡಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar