ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ – ಐವನ್ ಡಿಸೋಜ ಆರೋಪ

ಮಂಗಳೂರು : ಮೂಡಾ ನಿವೇಶನ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಹಾಜರಾಗಬೇಕೆಂದು ಬೀದಿಗಿಳಿದು ಹೋರಾಟ ನಡೆಸಿದ್ದ ಬಿಜೆಪಿ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಿ ತನಿಖೆ ಎದುರಿಸಿದ ಬಳಿಕ ತನ್ನ ವರಸೆ ಬದಲಿಸಿ ಅದೊಂದು ಐವಾಷ್, ನಾಟಕ, ಬಿ-ರಿಪೋರ್ಟ್ ಹಾಕುವ ತಂತ್ರ ಎಂದು ಹೇಳಲಾರಂಭಿಸಿದೆ. ಇದನ್ನೆಲ್ಲಾ ನೋಡುವಾಗ ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ ಎಂದೆನ್ನಿಸುತ್ತದೆ ಎಂದು ಎಂಎಲ್‌ಸಿ ಐವನ್ ಡಿಸೋಜ ಆರೋಪಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯ ತೀರ್ಮಾನವನ್ನು ಸ್ವೀಕರಿಸಿದವರು ಯಾರು‌ ಎಂದು ಬಿ.ವೈ‌.ವಿಜೇಂದ್ರ ಉತ್ತರಿಸಲಿ. ಆರೋಪ ಬಂದ ಮೇಲೆ ಬಿಟ್ಟು ಓಡುತ್ತಾರೆಂದು ನೀವು ಅಂದುಕೊಂಡಿರಿ. ಆದರೆ ತಪ್ಪು ಮಾಡಿದರೆ ಓಡುತ್ತಾರೆ. ಸಿಎಂ ಸಿದ್ದರಾಮಯ್ಯರಿಗೆ ತಮ್ಮ 40ವರ್ಷದ ರಾಜಕಾರಣದಲ್ಲಿ ಇಂದಿನವರೆಗೆ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿರುವ ಆತ್ಮಸ್ಥೈರ್ಯವಿದೆ. 2014ರಲ್ಲಿ ಯಡಿಯೂರಪ್ಪರ ಮೇಲೆ ಇದೇ ರೀತಿ ಆರೋಪ ಕೇಳಿ ಬಂದಾಗ ಅವರು ರಾಜಿನಾಮೆ ನೀಡಿದ್ದರೆ, ಆ ಬಳಿಕ ಚಾರ್ಜ್‌ಶೀಟ್ ಫೈಲ್ ಮಾಡಿ ತನಿಖೆಗೆ ಹೋದಾಗ ತಾನೆ ಅವರು ರಾಜಿನಾಮೆ ಕೊಟ್ಟದ್ದು. ವಿಜೇಂದ್ರರ ಮೇಲೆ 14ಇಡಿ ಪ್ರಕರಣವಿದೆಯಲ್ಲ ಅದನ್ನೇಕೆ ತಾವು ಲೋಕಾಯುಕ್ತ, ಸಿಬಿಐ ತನಿಖೆ ನಡೆಸಲು ಹೇಳುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿಯವರು ಓರ್ವ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಲೋಕಾಯುಕ್ತದ ಮುಂದೆ ಹಾಜರಾದರಲ್ಲ, ಅವರೇನು ರಾಜಿನಾಮೆ ಕೊಟ್ಟುಹೋದರೇ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಎಲ್ಲದರಲ್ಲೂ ಮೂಗು ತೂರಿಸುವುದು, ಎಲ್ಲವೂ ಸರಿಯಿಲ್ಲ ಎಂದು ಹೇಳುವುದು ವಿರೋಧಪಕ್ಷದ ಘನತೆ ಗೌರವಕ್ಕೆ ಕುಂದು ತರುತ್ತದೆ‌. ಬಿಜೆಪಿಯ ಆರೋಪ ಮತ್ತು ಮಾತುಗಳು ವಿರೋಧಪಕ್ಷದ ಗೌರವದ ಸ್ಥಾನಕ್ಕೆ ಚ್ಯುತಿ ತರುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.

Related posts

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ

ಪಾರ್ಕ್‌ ಮಾಡಿದ್ದ ದ್ವಿಚಕ್ರವಾಹನ ಕಳವು