ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಫೆಬ್ರವರಿ ಮೊದಲ ವಾರದಲ್ಲಿ ಬೃಹತ್‌ ಉದ್ಯೋಗ ಮೇಳ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ : ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ನಗರದಲ್ಲಿ ಬೃಹತ್‌ ಕೌಶಲ ರೋಜ್‌ಗಾರ್‌ ಉದ್ಯೋಗ ಮೇಳವು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಕೌಶಲ ರೋಜ್‌ಗಾರ್‌ ಮೇಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಜನರಿಗೆ ಉದ್ಯೋಗ ಒದಗಿಸುವ ಬೃಹತ್‌ ಉದ್ಯೋಗ ಮೇಳವು ಅಜ್ಜರಕಾಡು ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ರಾಜ್ಯ ಹಾಗೂ ಜಿಲ್ಲೆಯ ವಿವಿಧ ಪ್ರತಿಷ್ಠಿತ ಕಂಪೆನಿಗಳ 100ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸಲಿದ್ದು, 3,500ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಆಗಮಿಸುವ ನಿರೀಕ್ಷೆಯಲಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಯಲಿರುವ ಉದ್ಯೋಗ ಮೇಳದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಹಾಗೂ ವೃತ್ತಿಪರ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಹಳೆ ವಿದ್ಯಾರ್ಥಿಗಳಿಗೂ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಬೇಕು. ಮೇಳದಲ್ಲಿ ಭಾಗವಹಿಸುವ ಉದ್ಯೋಗ ಆಕಾಂಕ್ಷಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ನೋಂದಣಿಗೆ ವೆಬ್‌ಸೈಟ್‌ ಶೀಘ್ರದಲ್ಲಿ ರಚಿಸಿ, ನೋಂದಣಿಗೆ ಅನುವು ಮಾಡಿಕೊಡಬೇಕು ಎಂದರು.

ಜಿಪಂ ಯೋಜನ ನಿರ್ದೇಶಕ ಶ್ರೀನಿವಾಸ್‌ ರಾವ್‌, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ.ನಾಯಕ್‌, ಡಿಡಿಪಿಯು ಮಾರುತಿ, ಕೈಗಾರಿಕಾ ಉದ್ದಿಮೆಗಳ ಸಂಘದ ಅಧ್ಯಕ್ಷ ಹರೀಶ್‌ ಕುಂದರ್‌, ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥರು, ವಿವಿಧ ಕಾಲೇಜುಗಳ ಪ್ರತಿನಿ‌ಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ : ಇಬ್ಬರ ಬಂಧನ; ಯುವತಿಯ ರಕ್ಷಣೆ

ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

“ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆ!