ಬಾರಕೂರಿನ ಭಂಡಾರಕೇರಿ ಮಠ : ವಿಜಯನಗರ ತುಳುವ ಮನೆತನದ ಶಾಸನಗಳ ಅಧ್ಯಯನ

ಬಾರಕೂರು : ಬ್ರಹ್ಮಾವರ ತಾಲೂಕಿನ ಬಾರಕೂರಿನ ಭಂಡಾರಕೇರಿ ಮಠದಲ್ಲಿರುವ ವಿಜಯನಗರ-ತುಳುವ ಮನೆತನಕ್ಕೆ ಸೇರಿದ‌‌‌ ಎರಡು ಶಾಸನಗಳ ಅಧ್ಯಯನವನ್ನು‌ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಗಳ ಅನುಮತಿಯ ಮೇರೆಗೆ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ‌ಅಧ್ಯಯನ‌‌ ಪೀಠ-ಕುಕ್ಕೆ‌ ಸುಬ್ರಹ್ಮಣ್ಯ ‌ಇಲ್ಲಿನ‌ ಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ.‌ ಕಲ್ಲಾಪುರ ಮತ್ತು ಉಪನಿರ್ದೇಶಕರಾದ‌ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಇವರು ಮಾಡಿದ್ದಾರೆ. ಈ ಎರಡೂ‌ ಶಾಸನಗಳ ಉಲ್ಲೇಖಗಳು ಎಲ್ಲಿಯೂ ‌ಲಭ್ಯವಾಗದಿರುವುದರಿಂದ ಶಾಸನ ಅಧ್ಯಯನವನ್ನು ಕೈಗೊಳ್ಳಲಾಗಿದೆ‌. ಪ್ರಸ್ತುತ ಎರಡೂ ಶಾಸನಗಳು ತೃಟಿತಗೊಂಡಿದ್ದು,‌ ಗ್ರಾನೈಟ್ (ಕಣ‌) ಶಿಲೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕೊರೆಯಲ್ಪಟ್ಟಿದೆ.

ವಿಜಯನಗರ ತುಳುವ ದೊರೆ‌ ಕೃಷ್ಣದೇವರಾಯನ‌ ಕಾಲಕ್ಕೆ (ಸಾ.ಶ.ವ 1509-29) ಸೇರುವ ಜೈನ ಶಾಸನವು, ‌ಬಾರಕೂರಿನ ರಾಜ್ಯಪಾಲನಾಗಿದ್ದ ವಿಜೆಯಪ್ಪ ಒಡೆಯ‌ನನ್ನು (ಸಾ.ಶ.ವ 1519-20) ಉಲ್ಲೇಖಿಸುತ್ತದೆ. ಪ್ರಸ್ತುತ 11 ಸಾಲುಗಳನ್ನು ಮಾತ್ರ ಹೊಂದಿರುವ ಈ ಶಾಸನದಲ್ಲಿ ಚಂದ್ರಗ್ರಹಣದ‌ ಸಂದರ್ಭದಲ್ಲಿ ಮಾಡಿದ‌ ದಾನದ ಕುರಿತಾಗಿ ತಿಳಿಸುತ್ತದೆ. ರಘುವರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಗೋಪಿನಾಥ‌ ದೇವರ ಉಲ್ಲೇಖದ ಜೊತೆಗೆ ಕೊಟ್ಟಿರುವ ದಾನಕ್ಕೆ‌ ಸಾಕ್ಷಿಯಾಗಿ ಹೊಸವಳಲ (ಪ್ರಸ್ತುತ ಹೊಸಾಳ) ಜಂನಿಗಳ ಮತ್ತು ವಿಜೆಯಪ್ಪ ಒಡೆಯರ‌ ಒಪ್ಪ ಎಂದು ಹೇಳಿದೆ. ಶಾಪಾಶಯ ವಾಕ್ಯದೊಂದಿಗೆ “ಶ್ರೀ ವಿತರಾಗ‌” ಎಂಬ ಜಿನ ಒಕ್ಕಣೆಯೊಂದಿಗೆ ಶಾಸನ ಮುಕ್ತಾಯಗೊಂಡಿರುತ್ತದೆ.

ಕ್ಷೇತ್ರಕಾರ್ಯ ಶೋಧನೆಯಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ,‌ ಇದರ ಅಧ್ಯಯನ ‌ನಿರ್ದೇಶಕರಾದ ಪ್ರೊ.‌ ಎಸ್.ಎ ಕೃಷ್ಣಯ್ಯ ಹಾಗೂ ಮಠದ ಸಿಬ್ಬಂದಿ ಕುಶಾಲ ದೇವಾಡಿಗ, ಪುರಾತತ್ತ್ವ ‌ಸಂಶೋಧನಾರ್ಥಿಗಳಾದ ಮಂಜುನಾಥ ನಂದಳಿಕೆ, ಶ್ರಾವ್ಯಾ ಆರ್ ಮತ್ತು ಯಶಸ್ವಿನಿ ಆಚಾರ್ಯ ಸಹಕಾರ ನೀಡಿರುತ್ತಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು