ಬಸ್‌ನಲ್ಲಿ ತಿಗಣೆ ಕಾಟ – ಸಿನಿಮಾ ಕಲಾವಿದನ ಪತ್ನಿಗೆ 1ಲಕ್ಷ ಪರಿಹಾರ ಕೊಡಲು ಬಸ್ ಕಂಪೆನಿಗೆ ಆದೇಶಿಸಿದ ಗ್ರಾಹಕರ ಆಯೋಗ

ಮಂಗಳೂರು : ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಿಗಣೆ ಕಾಟದಿಂದಾಗಿ ಅನಾರೋಗ್ಯಕ್ಕೀಡಾದ ತುಳು ಸಿನಿಮಾ, ಕನ್ನಡ ಸೀರಿಯಲ್ ಕಲಾವಿದ ಶೋಭರಾಜ್ ಪತ್ನಿ ದೀಪಿಕಾ ಸುವರ್ಣರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ 1ಲಕ್ಷ ಪರಿಹಾರ ನೀಡಲು ಖಾಸಗಿ ಬಸ್ ಕಂಪೆನಿಗೆ ಆದೇಶಿಸಿದೆ.

2022ರ ಸಂದರ್ಭ ಶೋಭರಾಜ್ ಮತ್ತು ದೀಪಿಕಾ ಸುವರ್ಣ ಜೊತೆಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಜರಾಣಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದರು. ಅದಕ್ಕಾಗಿ 2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ದೀಪಿಕಾ ಸುವರ್ಣ ಸೀಬರ್ಡ್ ಕಂಪೆನಿಯ ಸ್ಲೀಪ‌ರ್ ಬಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ರೆಡ್ ಬಸ್ ಆ್ಯಪ್‌ನಲ್ಲಿ ಬಸ್ ಬುಕ್ ಮಾಡಿದ್ದರು. ಸೀಬರ್ಡ್ ಬಸ್‌ನಲ್ಲಿ ಉತ್ತಮ ಸೌಲಭ್ಯ ಇದೆಯೆಂದು ರೆಡ್ ಬಸ್‌ ಸಿಬ್ಬಂದಿ ತಿಳಿಸಿದ್ದರು. ರಾತ್ರಿ 10.30ಕ್ಕೆ ಮಂಗಳೂರಿನಲ್ಲಿ ಬಸ್‌ ಹತ್ತಿದ್ದು ಕೆಲ ಹೊತ್ತಿನಲ್ಲೇ ತಿಗಣೆ ಕಾಟ ಶುರುವಾಗಿತ್ತು. ಬಳಿಕ ತಿಗಣೆ ಕಾಟ ತಾಳಲಾರದೆ ಬಸ್ ಸಿಬ್ಬಂದಿಗೂ ಮಾಹಿತಿ ನೀಡಿದ್ದರು. ಆದರೆ ಬಸ್ ಸಿಬ್ಬಂದಿ ಕ್ಯಾರೆಂದಿರಲಿಲ್ಲ.

ಮರುದಿನ ಬೆಂಗಳೂರು ತಲುಪಿದಾಗ, ಕುತ್ತಿಗೆ, ಬೆನ್ನು ಸೇರಿದಂತೆ ಎಲ್ಲೆಡೆ ನೋವು ಶುರುವಾಗಿತ್ತು. ಪರಿಣಾಮ ಅಸೌಖ್ಯದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ದೈಹಿಕ ನೋವಿನಿಂದಾಗಿ 15 ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಶೂಟಿಂಗ್ ಇದ್ದುದರಿಂದ ತುರ್ತಾಗಿ ಮಂಗಳೂರಿನಿಂದ ದೀಪಿಕಾ ಬೆಂಗಳೂರಿಗೆ ತೆರಳಿದ್ದರು. ಆದರೆ ತಿಗಣೆ ಕಾಟದಿಂದಾಗಿ ಅಸೌಖ್ಯ ಉಂಟಾಗಿದ್ದರಿಂದ ದೀಪಿಕಾಗೆ ಎರಡು ವಾರಗಳ ಕಾಲ ಶೋನಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ದಂಪತಿಗೆ ದೊಡ್ಡ ನಷ್ಟವಾಗಿತ್ತು.

ರಿಯಾಲಿಟಿ ಶೋದಲ್ಲಿ ಭಾಗವಹಿಸದ್ದರಿಂದ ಇವರು ಎಲಿಮಿನೇಟ್ ಆಗಿದ್ದರು. ಆದ್ದರಿಂದ ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದಿತ್ತು. ಇವರಿಗೆ ಒಂದು ಶೋಗೆ ಕಲರ್ಸ್ ವಾಹಿನಿಯಿಂದ 40 ಸಾವಿರ ಸಂಭಾವನೆ ಸಿಗುತ್ತಿತ್ತು. ಸೀಬರ್ಡ್ ಬಸ್ ಅವ್ಯವಸ್ಥೆಯಿಂದ ಬೇಸತ್ತ ದೀಪಿಕಾ ಸುವರ್ಣ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಬಸ್‌ ಕಂಪನಿ ಮತ್ತು ಬಸ್ ಟಿಕೆಟ್ ಬುಕ್ ಮಾಡಿದ್ದ ರೆಡ್ ಬಸ್ ವಿರುದ್ಧ ದೂರು ದಾಖಲಿಸಿದ್ದರು. ತನಗಾದ ಆಸ್ಪತ್ರೆ ವೆಚ್ಚ 18,650 ರೂ.ವನ್ನು ವರ್ಷಕ್ಕೆ ಶೇ.15ರ ಬಡ್ಡಿ ಸಹಿತ ನೀಡಬೇಕು. ಅಲ್ಲದೆ, ತನಗಾದ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದರು. ಅಲ್ಲದೆ, ವ್ಯಾಜ್ಯಕ್ಕಾದ ವೆಚ್ಚವನ್ನೂ ಭರಿಸಬೇಕೆಂದು ಕೋರಿದ್ದರು.

ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಹಂಡಿಗೋಳ್ ಮತ್ತು ಮಹಿಳಾ ಸದಸ್ಯೆ ಶಾರದಮ್ಮ ಎಚ್‌.ಜಿ ಪ್ರಕರಣದಲ್ಲಿ ಅಂತಿಮ ಆದೇಶ ನೀಡಿದ್ದಾರೆ. ಆಸ್ಪತ್ರೆಗೆ ತಗಲಿದ ವೆಚ್ಚ 18,650 ರೂ.ವನ್ನು ಅರ್ಜಿ ದಾಖಲಿಸಿದ 6-4-2023ರಿಂದ ಅನ್ವಯವಾಗುವಂತೆ ವರ್ಷಕ್ಕೆ 6 ಶೇಕಡಾ ಬಡ್ಡಿ ಸಹಿತ ಪಾವತಿಸಬೇಕು. ಬಸ್ ಟಿಕೆಟ್ ದುಡ್ಡು 840 ರೂ.ವನ್ನು ವಾರ್ಷಿಕ 6 ಶೇ. ಬಡ್ಡಿ ಸಹಿತ ಅರ್ಜಿದಾರರಿಗೆ ಪಾವತಿಸಬೇಕು. ಸೇವೆಯಲ್ಲಿ ವ್ಯತ್ಯಯಗೊಳಿಸಿದ್ದಲ್ಲದೆ, ಅರ್ಜಿದಾರ ಮಹಿಳೆಗಾದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪ್ರತಿಯಾಗಿ 1ಲಕ್ಷ ರೂ. ಪರಿಹಾರವನ್ನು ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ನೀಡಬೇಕು. ಅಲ್ಲದೆ, ಅರ್ಜಿದಾರರಿಗೆ ಆಗಿರುವ ವಕೀಲಿಕೆ ವೆಚ್ಚ 10 ಸಾವಿರವನ್ನೂ ಭರಿಸಬೇಕು ಎಂದು ತೀರ್ಪು ನೀಡಿದ್ದಾರೆ.

Related posts

ಗಂಗೊಳ್ಳಿ ಪಂಚಾಯತ್‌ನಲ್ಲಿ ಮುಸ್ಲಿಂ ಮೌಲ್ವಿಯ ಪ್ರಾರ್ಥನೆಗೆ ಆಕ್ಷೇಪ; ಇಂದು ಗಣಹೋಮ!

ಜ.5ರಿಂದ ಉಡುಪಿಯಲ್ಲಿ 23ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆ; ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ

ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿದಾರನಾಗಿ ವಂಚನೆ – ಆರೋಪಿ ಅಂದರ್