ಜನವರಿ 11-12ರಂದು ಬೀಚ್‌ ಉತ್ಸವ; ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ : ಜಿಲ್ಲಾಧಿಕಾರಿ ಮುಲೈ ಮುಗಿಲನ್

ಮಂಗಳೂರು : ಕರಾವಳಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತವು ಮುಡಾ, ಎನ್‌ಎಂಪಿಟಿ ಹಾಗೂ ರೋಹನ್‌ ಕಾರ್ಪೊರೇಶನ್‌ ಸಹಭಾಗಿತ್ವದಲ್ಲಿ ಆಯೋಜಿಸಿರುವ ಬೀಚ್‌ ಉತ್ಸವ ತಣ್ಣೀರುಬಾವಿಯಲ್ಲಿ ಜ.11 ಮತ್ತು 12ರಂದು ಮರುನಿಗದಿಯಾಗಿದ್ದು ಸುರಕ್ಷತೆ-ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ ಬೀಚ್‌ ಉತ್ಸವ ಸಮಿತಿಯ ಅಧ್ಯಕ್ಷ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅವರು ಮಾತನಾಡಿ, ಬೀಚ್‌ನ ಶುಚಿತ್ವಕ್ಕೆ ಸಂಬಂಧಿಸಿ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರರ ಜೀವರಕ್ಷಕ ತಂಡ, ಕರಾವಳಿ ಪೊಲೀಸ್‌ ತಂಡ ರಚಿಸಲಾಗಿದೆ. ಅಗತ್ಯ ಲೈಟಿಂಗ್‌ ವ್ಯವಸ್ಥೆ ಜತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಬೀಚ್‌ನ‌ಲ್ಲಿ ಸಮುದ್ರದ ಬಳಿ ಜಲ ಸಾಹಸ ಕ್ರೀಡೆಗಳಿಗೆ ಸಂಜೆ 6.30ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಬೀಚ್‌ ಉತ್ಸವ ರಾತ್ರಿ 9.30ರ ವರೆಗೆ ಇರಲಿದೆ ಎಂದರು.

ಕರಾವಳಿ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕಳೆದ ರವಿವಾರ ಕರಾವಳಿ ಉತ್ಸವ ಮೈದಾನಕ್ಕೆ ಸುಮಾರು 12,000ಕ್ಕೂ ಅಧಿಕ ಮಂದಿ ಹಾಗೂ ಶ್ವಾನ ಪ್ರದರ್ಶನದಲ್ಲಿ 3,500ಕ್ಕೂ ಅಧಿಕ ಮಂದಿ ಸೇರಿದ್ದರು ಎಂದವರು ತಿಳಿಸಿದರು.

ಬೀಚ್‌ಗಳ ಮೂಲಕ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಬೀಚ್‌ ಉತ್ಸವ ಪ್ರಮುಖ ಪಾತ್ರ ವಹಿಸಲಿದೆ. ಕರಾವಳಿ ಉತ್ಸವ ಈಗಾಗಲೇ ಜನಾಕರ್ಷಣೆ ಪಡೆದಿದೆ ಎಂದರು. ಈ ಸಂದರ್ಭ ಬೀಚ್‌ ಉತ್ಸವದ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಜ.11ರಂದು ಸಂಜೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, 6 ಗಂಟೆಗೆ ನೃತ್ಯ ಉತ್ಸವ ಆಯೋಜಿಸಲಾಗಿದೆ. ಬಳಿಕ ಮಣಿಕಾಂತ್‌ ಕದ್ರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ.12ರಂದು ಬೆಳಗ್ಗೆ 5.30ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದಿಂದ ಕಾರ್ಯಕ್ರಮ, 6.30ಕ್ಕೆ ಉದಯರಾಗ, 9ರಿಂದ ಜಲಕ್ರೀಡೆ ನಡೆಯಲಿದೆ. 9.30ಕ್ಕೆ ಮರಳು ಶಿಲ್ಪ ಸ್ಪರ್ಧೆ ನಡೆಯಲಿದೆ. ಸಂಜೆ 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ರಘು ದೀಕ್ಷಿತ್‌ರವರಿಂದ ಲೈವ್‌ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ|ಅರುಣ್‌ ಕುಮಾರ್‌, ಮುಡಾ ಆಯುಕ್ತೆ ನೂರ್‌ ಜಹರಾ ಖಾನಂ, ಪಣಂಬೂರು ಬೀಚ್‌ ಅಭಿವೃದ್ಧಿ ಸಮಿತಿಯ ಯತೀಶ್‌ ಬೈಕಂಪಾಡಿ ಉಪಸ್ಥಿತರಿದ್ದರು.

Related posts

ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

ಮಾಹೆ ಮಣಿಪಾಲ ಮತ್ತು ಹಿಲ್ಡೆಶೈಮ್, ಜರ್ಮನಿಯು ಜಂಟಿಯಾಗಿ “ಚಿಕಿತ್ಸಕ ತತ್ತ್ವಶಾಸ್ತ್ರ”ದ ಕುರಿತು ಮೊದಲ ಅಂತರರಾಷ್ಟ್ರೀಯ ಸಮ್ಮೇಳನ

ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ – ಸುನಿಲ್ ಕುಮಾರ್ ವ್ಯಂಗ್ಯ