ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆ

ಮಂಗಳೂರು : ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಉಳ್ಳಾಲ ಕಡಪ್ಪರ ನಿವಾಸಿ ಶಮೀರ್‌ನನ್ನು ತಂಡವೊಂದು ಅಟ್ಟಾಡಿಸಿಕೊಂಡು ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ. 66ರ ಕಲ್ಲಾಪು ವಿ.ಕೆ.ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಶಮೀರ್ ಕಾರಿನಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಶಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಅಪಾಯವನ್ನು ಅರಿತ ಶಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ್ದಾನೆ. ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್‌ನಿಂದ ಸುಮಾರು 500 ಮೀ ದೂರದಲ್ಲಿರುವ ವಿ.ಕೆ. ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕಡಿದು ಹತ್ಯೆ ನಡೆಸಿದೆ.

ಘಟನೆಯ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಜೊತೆಗೆ ಹುಡುಕಾಡಿದ್ದು ಶಮೀರ್ ಮತ್ತು ಆತನನ್ನು ಅಟ್ಟಾಡಿಸಿಕೊಂಡು ಹೋದ ತಂಡವೂ ಪತ್ತೆಯಾಗಿರಲಿಲ್ಲ. ಇಬ್ಬರೂ ತಪ್ಪಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ಹುಡುಕಾಟ ನಡೆಸಿ ತೆರಳಿದ್ದರು. ಈ ಸಂದರ್ಭದಲ್ಲಿ ಕೊಲೆಯಾದ ಶಮೀರ್ ಓಡಿದ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಜನರು ಜಮಾಯಿಸಿದ್ದು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

2018‌ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್‌ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಶಮೀರ್, ರಿಯಾಝ್, ಶಮೀರ್ ಕಡಪ್ಪರ‌, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಹತ್ಯೆ ನಡೆಸಿದ್ದರು. ಪ್ರಕರಣದಲ್ಲಿ ಶಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಶಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್‌ನನ್ನು ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು.

ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ಪಾಂಡೇಶ್ವರ ಚಿಕನ್ ಸ್ಟಾಲ್‌ನಲ್ಲಿ ಶೂಟೌಟ್ ಸೇರಿದಂತೆ ಹಲ್ಲೆ, ದರೋಡೆ ಪ್ರಕರಣಗಳು ಸೇರಿದಂತೆ 9‌ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅರೋಪಿಯಾಗಿದ್ದು, ಎರಡು ದಿನಗಳ ಹಿಂದೆಯಷ್ಟೇ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದಿದ್ದ, ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ