ಶೀರೂರು ಪರ್ಯಾಯದ ಪೂರ್ವಭಾವಿ ಬಾಳೆ ಮುಹೂರ್ತ

ಉಡುಪಿ : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀವೇದವರ್ಧನತೀರ್ಥರ ಪ್ರಥಮ ಪರ್ಯಾಯದ ಪೂರ್ವಭಾವಿ ಮುಹೂರ್ತಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಿತು.

ಶೀರೂರು ಮಠದ 31ನೇ ಯತಿಯಾಗಿರುವ ಶ್ರೀವೇದವರ್ಧನ ತೀರ್ಥರು ಎರಡು ವರ್ಷಗಳ (2026ರ ಜ.18ರಿಂದ 2028ರ ಜ.17 ರವರೆಗೆ) ಶ್ರೀಕೃಷ್ಣಪೂಜೆಗಾಗಿ ಪರ್ಯಾಯ ಪೀಠಾರೋಹಣ ಮಾಡಲಿದ್ದು ಇದಕ್ಕೆ ಪೂರ್ವಭಾವಿಯಾಗಿ ನಡೆಯುವ ನಾಲ್ಕು ಮುಹೂರ್ತಗಳಲ್ಲಿ ಇದು ಮೊದಲನೇಯದಾಗಿದೆ. ನಗರದ ಪೂರ್ಣಪ್ರಜ್ಞ ಕಾಲೇಜು ಬಳಿ ಇರುವ ಶೀರೂರು ಮಠದ ತೋಟದಲ್ಲಿ ಬಾಳೆಮುಹೂರ್ತ ನಡೆಯಿತು.

ಬಾಳೆ ಮುಹೂರ್ತದ ಅಂಗವಾಗಿ ಶೀರೂರು ಮಠದ ಪಟ್ಟದ ಶ್ರೀವಿಠಲ ದೇವರಿಗೆ ಭಾವಿ ಪರ್ಯಾಯ ಪೀಠಾಧೀಶರು ಪೂಜೆ ನೆರವೇರಿಸಿದ ಬಳಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಂಗಳವಾದ್ಯ ಸಹಿತ ಮರವಣಿಗೆಯಲ್ಲಿ ಚಂದ್ರೇಶ್ವರ, ಅನಂತೇಶ್ವರ, ಭಾಗೀರಥಿ ಗುಡಿ, ನವಗ್ರಹ ಕಿಂಡಿ ಎದುರು ಶ್ರೀಕೃಷ್ಣಮುಖ್ಯಪ್ರಾಣ ಹಾಗೂ ಇತರ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಶೀರೂರು ಮಠದಲ್ಲಿ ಪಟ್ಟದ ದೇವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ವೇದಘೋಷ, ಘೋಷಣೆಯೊಂದಿಗೆ ನೂರಾರು ಬಾಳೆ ಗಿಡ, ಕಬ್ಬು ತುಳಸಿಯನ್ನು ಮೆರವಣಿಗೆಯಲ್ಲಿ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿರುವ ಅಬ್ಬಾರಣ್ಯದ ನಾಗನ ಗುಡಿಯಲ್ಲಿ ಪ್ರಾರ್ಥನೆ ಬಳಿಕ ಶೀರೂರು ಮಠದ ತೋಟದಲ್ಲಿ ಬಾಳೆಗಿಡ, ತುಳಸಿ, ಕಬ್ಬನ್ನು ಶ್ರೀವೇದವರ್ಧನತೀರ್ಥರು ನೆಟ್ಟರು. ಬಳಿಕ ಸೇರಿದ ಗಣ್ಯರು, ಭಕ್ತರು ಒಂದೊಂದು ಬಾಳೆ ಕುಡಿಯನ್ನು ನೆಟ್ಟು ನೀರೆರೆದರು.

Related posts

ರೈತರಿಗೆ ತೊಂದರೆಯಾಗದಂತೆ ಯೋಜನೆ ಅನುಷ್ಠಾನ ಮಾಡಿ – ಸುನಿಲ್‌ ಕುಮಾರ್‌ ಒತ್ತಾಯ

ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ – ಜಾಥಾಗೆ ನೂರಾರು ವಿದ್ಯಾರ್ಥಿಗಳ ಸಾಥ್

ಉಚ್ಚಿಲದಲ್ಲಿ ಕೆಎಸ್ಆರ್‌ಟಿ‌ಸಿ ಬಸ್ ಡಿಕ್ಕಿ; ಪಾದಾಚಾರಿ ಸಾವು