ಉಡುಪಿ : ಪ್ರಧಾನ ಮಂತ್ರಿ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ನಂಬಿಸಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿದ್ದ ಆರೋಪಿಗೆ ಉಡುಪಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿದೆ.
ಆರೋಪಿ ಉದಯ್ ಕುಮಾರ್ ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಅಧೀನ ಕಾರ್ಯದರ್ಶಿ ಎಂದು ಶ್ರೀಕೃಷ್ಣ ಮಠದ ದಿವಾನ್ ನಾಗರಾಜ್ ಅವರಿಗೆ ಕರೆ ಮಾಡಿ, ತಾವು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣಮಠದ ದರ್ಶನಕ್ಕೆ ಆಗಮಿಸುತ್ತಿದ್ದೇವೆ. ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕೋರಿಕೊಂಡಿದ್ದರು. ಅದರಂತೆ ಅಕ್ಟೋಬರ್ 10ರಂದು ಬೆಳಗ್ಗೆ ಇನ್ನೋವಾ ಕ್ರಿಸ್ಟಾ ವಾಹನದ ಮುಂಭಾಗದ ಬೋನೆಟ್ ಮೇಲೆ ಕೆಂಪು ಅಕ್ಷರದಲ್ಲಿ “ಗವರ್ನಮೆಂಟ್ ಆಫ್ ಇಂಡಿಯ” ಹಾಗೂ ಹಿಂಬದಿಯ ಗಾಜಿನಲ್ಲಿ ಆರ್ಮಿ ಎಂಬುದಾಗಿ ಬರೆದಿದ್ದ ವಾಹನದಲ್ಲಿ ಬಂದ ಅವರಿಗೆ ಕೇಂದ್ರ ಅಧೀನ ಕಾರ್ಯದರ್ಶಿಗಳಿಗೆ ಕಲ್ಪಿಸುವಂತಹ ಎಲ್ಲ ವ್ಯವಸ್ಥೆ ಕಲ್ಪಿಸಿ, ವಿಶೇಷ ದರ್ಶನ ಮಾಡಿಸಿದ್ದರು.
ಅನಂತರದಲ್ಲಿ ಅವರ ಚಲನ ವಲನದ ಮೇಲೆ ಸಂಶಯಗೊಂಡ ದಿವಾನರು ಪ್ರಧಾನಮಂತ್ರಿ ಕಾರ್ಯಾಲಯದ ವೆಬ್‌ಸೈಟ್ ಪರಿಶೀಲಿಸಿದಾಗ ಬಂದವರು ಸುಳ್ಳು ಮಾಹಿತಿ ನೀಡಿದ್ದಾಗಿ ತಿಳಿದು, ಸರಕಾರಿ ಅಧಿಕಾರಿ ಎಂಬ ಸೋಗಿನಲ್ಲಿ ಕೃಷ್ಣಮಠಕ್ಕೆ ಬಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿ ಉದಯ್ ಕುಮಾರ್ ನ್ಯಾಯಾಲಯಕ್ಕೆ ಶರಣಾಗಿರುವ ಕಾರಣ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆರೋಪಿ ಪರ ಉಡುಪಿಯ ವಕೀಲ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ವಾದಿಸಿದ್ದಾರೆ.