ಬಡಿಲ ಹುಸೈನ್ ಹಾಗೂ ಹರೇಕಳ ಮೈಮುನಾಗೆ ಪ್ರತಿಷ್ಠಿತ “ವರ್ಷದ ಬ್ಯಾರಿ” ಪ್ರಶಸ್ತಿ

ಬೆಂಗಳೂರು : ರಾಜ್ಯದ ನವಸಾಕ್ಷರ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿರುವ, ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ 2024ನೇ ಸಾಲಿನ “ವರ್ಷದ ಬ್ಯಾರಿ” ಹಾಗೂ ಒಬ್ಬಂಟಿಯಾದರೂ ಮಗಳ ಜೊತೆಗೂಡಿ 75ಕ್ಕೂ ಹೆಚ್ಚು ಹಸು, ಕರುಗಳನ್ನು ಸಾಕಿ ಯಶಸ್ವಿ ಹೈನೋದ್ಯಮಿಯಾಗಿರುವ ಹರೇಕಳದ ಮೈಮುನಾ-ಮರ್ಜೀನ ಅವರು “ವರ್ಷದ ಬ್ಯಾರ್ದಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಬ್ಯಾರೀಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್ ತಿಳಿಸಿದ್ದಾರೆ.

ಸಂಸ್ಥೆಯು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಯಶಸ್ವಿ ಸಾಧಕ ಬ್ಯಾರಿಗಳಿಗೆ ಪ್ರತಿವರ್ಷ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯು ಪ್ರಶಸ್ತಿ ಫಲಕ, ಸನ್ಮಾನ ಪತ್ರ ಮತ್ತು ತಲಾ 50,000 ರೂಪಾಯಿ ನಗದನ್ನು ಒಳಗೊಂಡಿದೆ.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಬ್ಯಾರಿ ಸಮುದಾಯದ 12ಕ್ಕೂ ಹೆಚ್ಚು ಸಾಧಕರ ಸಾಧನೆಗಳನ್ನು ಪರಿಶೀಲಿಸಿದ ಬಳಿಕ ಸಂಸ್ಥೆಯು ಈ ಆಯ್ಕೆಯನ್ನು ಮಾಡಿದೆ ಎಂದು ಫಾರೂಕ್ ತಿಳಿಸಿದ್ದಾರೆ.

ಜೂನ್ 9 ರಂದು ಬೆಂಗಳೂರಿನ ಎಚ್.ಬಿ.ಆರ್ ಲೇಔಟಿನಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಂ.ಸಿ.ಸುಧಾಕರ್, ಬಿಡಿಎ ಅಧ್ಯಕ್ಷ, ಶಾಸಕ ಎನ್.ಎ.ಹ್ಯಾರಿಸ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಎಸ್ಸೆಸೆಲ್ಸಿ, ಪಿಯುಸಿಯಲ್ಲಿ ಶೇ. 90‌ಕ್ಕೂ ಹೆಚ್ಚು ಅಂಕ ಗಳಿಸಿದ ನೂರಕ್ಕೂ ಹೆಚ್ಚು ಬ್ಯಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಹ ಸಂಘ ಸಂಸ್ಥೆಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ