ಉಡುಪಿ : ಮೊಬೈಲ್, ಇನ್ನಿತರ ಕಾರಣಗಳಿಂದ ನಾಟಕ, ಇನ್ನಿತರ ರಂಗ ಚಟುವಟಿಕೆಗಳಿಂದ ಜನರು ದೂರವಾಗುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳನ್ನು, ಪ್ರಜ್ಞೆಯನ್ನು ಬಿತ್ತುವ ಮೂಲಕ ಮತ್ತೆ ಪ್ರೇಕ್ಷಕರನ್ನು ಹತ್ತಿರಕ್ಕೆ ತರುವ ಕೆಲಸವನ್ನು ಸುಮನಸಾದಂತಹ ರಂಗತಂಡಗಳು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ನಾಲ್ಕನೇ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯವು ಶ್ಲಾಘನೀಯ. ಹಿರಿಯರೇ ಪ್ರೇಕ್ಷಕರಾಗಿ ಬರುತ್ತಿದ್ದಾರೆ. ತಮ್ಮ ಜೊತೆಗೆ ಮಕ್ಕಳನ್ನೂ ಕರೆದುಕೊಂಡು ಬಂದರೆ ಅವರೂ ಮುಂದೆ ರಂಗಕರ್ಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು. ಉಪ್ಪೂರು ಭಾಗ್ಯಲಕ್ಷ್ಮೀ ಅವರನ್ನು ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉದ್ಯಮಿ ಹರೀಶ್ ಪೂಜಾರಿ, ವರಾಹಿ ದಂತ ಚಿಕಿತ್ಸಾಲಯದ ಡಾ. ವಿಜೇತ್ ಶೆಟ್ಟಿ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಬಳಿಕ ಸುಮನಸಾ ಕೊಡವೂರು ಕಲಾವಿದರಿಂದ ‘ಈದಿ’ ನಾಟಕ ಪ್ರದರ್ಶನಗೊಂಡಿತು.