ನಿರ್ಜನ ಪ್ರದೇಶದಲ್ಲಿ ಬಾಲಕಿಯನ್ನ ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನ : ಆರೋಪಿಯ ಬಂಧನ

ಮೂಡುಬಿದಿರೆ : ಪಾಲಡ್ಕ ಗ್ರಾಪಂ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬಾಲಕಿಯನ್ನ ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಅಲಂಗಾರು ಉಳಿಯಾ ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.

ಈತ ಮಾ.8ರಂದು ಸಂಜೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ನಗರದಲ್ಲಿ ಟ್ಯೂಶನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ.

ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದ್ದು, ಈ ವೇಳೆ ಆರೋಪಿ ಪವನ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ವಿವಿಧ ಮೂಲಗಳಿಂದ ಈತನ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ಅಲಂಗಾರು ಬಳಿ ಈತನನ್ನು ಬಂಧಿಸಿದ್ದಾರೆ. ಆರೋಪಿ ಪವನ್ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಅಖಿಲ್ ಅಹಮದ್, ನಾಗರಾಜ್ ಲಂಬಾಣಿ, ಮೊಹಮ್ಮದ್ ಹುಸೇನ್, ಮೊಹಮ್ಮದ್ ಇಕ್ಬಾಲ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ