ಉಡುಪಿ ಕಡಲತೀರದಲ್ಲಿ ಪೆಹಲ್ಗಾಮ್ ಹಿಂದೂ ನರಮೇಧದ ಮೃತರ ಆತ್ಮಕ್ಕೆ ಶಾಂತಿ ಕೋರಿ ಅಪರಕ್ರಿಯೆ

ಉಡುಪಿ : ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ ಮೃತಪಟ್ಟವರ ಆತ್ಮದ ಸದ್ಗತಿಗಾಗಿ ಉಡುಪಿಯ ಕಡಲತೀರದಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು. ಅಭಿನವ ಭಾರತ ಸೊಸೈಟಿ ಸಂಘಟನೆಯ ಆಶ್ರಯದಲ್ಲಿ ನಡೆದ ಈ ಅಪರಕ್ರಿಯೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ತರ್ಪಣ ಹೋಮವನ್ನು ಆಯೋಜಿಸಲಾಗಿತ್ತು.

26 ಮೃತ ಕುಟುಂಬಗಳ ಪರವಾಗಿ 26 ಯುವಕರು ಈ ತರ್ಪಣ ಕಾರ್ಯದಲ್ಲಿ ಪಾಲ್ಗೊಂಡರು. ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿಗಳ ನೇತೃತ್ವದಲ್ಲಿ ಹನೂಮಾನ್ ವಿಠೋಭ ರುಕುಮಾಯಿ ಮಂದಿರದ ಬಳಿಯ ಕಡಲತೀರದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಗೀತಾ ತ್ರಿಷ್ಟುಪ್ ಹೋಮವನ್ನು ನೆರವೇರಿಸಿ ಪೂರ್ಣಾಹುತಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪವಿತ್ರ ಮಂತ್ರಗಳ ಸಹಸ್ರ ಪಠಣ ನಡೆಯಿತು. ನರಮೇಧದಲ್ಲಿ ಬಲಿಯಾದ ಹಿಂದೂ ಕುಟುಂಬಗಳ ಜೊತೆ ಹಿಂದೂ ಸಮಾಜ ಸದಾ ನಿಂತಿದೆ ಎಂಬುದನ್ನು ಸಾರುವ ಈ ಕಾರ್ಯಕ್ರಮದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು. ಅಲ್ಲದೆ, ದುಃಖದಲ್ಲಿರುವ ಕುಟುಂಬಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ನೀಡುವಂತೆ ಭಗವಂತನಲ್ಲಿ ಮೊರೆಯಿಡಲಾಯಿತು.

ಈ ಕುರಿತು ಮಾತನಾಡಿದ ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ಸೂರಲು ತಂತ್ರಿಗಳು, “ಪವಿತ್ರ ನದಿಗಳ ಸಂಗಮವಾದ ಈ ಸಮುದ್ರ ತೀರದಲ್ಲಿ ಹೋಮಗಳನ್ನು ನೆರವೇರಿಸಲಾಗಿದೆ. ಮೃತಪಟ್ಟ ಆತ್ಮಗಳಿಗೆ ಸದ್ಗತಿ ದೊರೆಯಲಿ ಮತ್ತು ಅವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದರು.

ಅಭಿನವ ಭಾರತ ಸೊಸೈಟಿಯ ಈ ಕಾರ್ಯಕ್ರಮವು ಪೆಹಲ್ಗಾಮ್ ನರಮೇಧದ ಸಂತ್ರಸ್ತರಿಗೆ ಹಿಂದೂ ಸಮಾಜದ ಬೆಂಬಲ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುವ ಮಹತ್ವದ ಕಾರ್ಯಕ್ರಮವಾಗಿತ್ತು.

Related posts

‘ಸಿಎಂ ಸಿದ್ರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ ಸಂಪತ್ ಅರೆಸ್ಟ್

ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್‌ನಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ

ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ