ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಆಧಾರ ರಹಿತ ಆರೋಪದ ಬಗ್ಗೆ ಯಾವುದೇ ತನಿಖೆಗೆ ಸ್ವಾಗತ : ಯಶ್‌ಪಾಲ್ ಸುವರ್ಣ

ಉಡುಪಿ : ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮಾಡಿರುವ ಎಲ್ಲಾ ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ ಎಂದು ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಬ್ಯಾಂಕಿನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಧ್ಯಮಗಳ ಮುಂದೆ ಸುಳ್ಳು ಮಾಹಿತಿ ನೀಡುತ್ತಿದ್ದು, ಬ್ಯಾಂಕಿನ ಆಡಳಿತ ಮಂಡಳಿ ಈಗಾಗಲೇ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ.

ಬ್ಯಾಂಕಿನ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿಗಳು ಬ್ಯಾಂಕಿನಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಬಗ್ಗೆ ಸಹಕಾರಿ ನ್ಯಾಯಾಲಯದಲ್ಲಿ ಸಾಲ ಮರುಪಾವತಿಗೆ ಆದೇಶ ನೀಡಿದ್ದು ತಪ್ಪಿದಲ್ಲಿ ಆಸ್ತಿ ಜಪ್ತಿಗೂ ಸೂಚನೆ ನೀಡಿದೆ.

ಮಹಾಲಕ್ಷ್ಮೀ ಬ್ಯಾಂಕಿನ ಏಳಿಗೆಯನ್ನು ಸಹಿಸದೆ, ವೈಯುಕ್ತಿಕ ತೇಜೋವಧೆಯ ದುರುದ್ದೇಶದಿಂದ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪದ ಮೂಲಕ ಅವರ ಹತಾಶ ಮನಸ್ಥಿತಿ ಬಯಲಾಗಿದೆ. ಈ ಬಗ್ಗೆ ಶನಿವಾರ ಬ್ಯಾಂಕಿನ ವತಿಯಿಂದ ಪತ್ರಿಕಾಗೋಷ್ಟಿ ನಡೆಸಿ ಎಲ್ಲಾ ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲಾಗುವುದು.

ಮಹಾಲಕ್ಷ್ಮೀ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಆರ್‌ಬಿ‌ಐ ನಿಯಮಾವಳಿಯಂತೆ ಸಹಕಾರಿ ತತ್ವದಡಿ ಪಾರದರ್ಶಕ ರೀತಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆ ರಾಜ್ಯ ಸಹಕಾರ ಇಲಾಖೆ ಅಥವಾ ಇ.ಡಿ, ಸಿ.‌ಬಿ.‌ಐ. ಯಾವುದೇ ಉನ್ನತ ಮಟ್ಟದ ತನಿಖೆಗೂ ಸಿದ್ಧವಿದೆ ಹಾಗೂ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯಲ್ಲೇ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ