ವಾಯ್ಸ್ ಮೆಸೇಜ್ ಸವಾಲಿಗೆ ಉತ್ತರ, ಬಂಟ್ವಾಳದಲ್ಲಿ ಹಿಂದು ಸಂಘಟನೆಗಳ ಜಮಾವಣೆ, ಉದ್ವಿಗ್ನ ಪರಿಸ್ಥಿತಿ

ಮಂಗಳೂರು : ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಇತ್ತೀಚೆಗೆ ಆಡಿದ್ದರೆನ್ನಲಾದ ಮಾತಿಗೆ ಉತ್ತರವಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮುಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್, ತಾಕತ್ತಿದ್ದರೆ ಈದ್ ಮೆರವಣಿಗೆ ವೇಳೆ ಬಂಟ್ವಾಳಕ್ಕೆ ಬನ್ನಿ ಎಂಬ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದರದ ಬಿ.ಸಿ.ರೋಡ್ ಪ್ರದೇಶ ಉದ್ವಿಗ್ನತೆಗೆ ಕಾರಣವಾಗಿದೆ.

ಹಿಂದು ಸಂಘಟನೆಗಳು ಸವಾಲನ್ನು ಸ್ವೀಕರಿಸಿ ಸೋಮವಾರ ಬಿ.ಸಿ.ರೋಡ್ ಚಲೋ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿಗೆ ಶರಣ್ ಪಂಪ್‌ವೆಲ್ ಆಗಮಿಸಿ ಸವಾಲು ಸ್ವೀಕರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಬಿ.ಸಿ.ರೋಡಿಗೆ ಬನ್ನಿ ಎಂದು ಆಡಿಯೋ ಸಂದೇಶ ಹಾಕಿದ ವಿಚಾರದ ನಂತರ ನಡೆದ ಬೆಳವಣಿಗೆಯಲ್ಲಿ ಇಂದು ಬೆಳಗ್ಗೆ ಹಿಂದು ಸಂಘಟನೆಗಳು ಬಿ.ಸಿ.ರೋಡ್ ಚಲೋ ಹಮ್ಮಿಕೊಂಡಿದ್ದರು. ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಅವರೇ ಬಿ.ಸಿ.ರೋಡಿಗೆ ಆಗಮಿಸಿದರು.

ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್‌ವೆಲ್, ಇವರ ಸವಾಲು ನಮಗೆ ಹೊಸದಲ್ಲ. ನಾವು ಪ್ರತಿಭಟನೆ ಮಾಡಿದ್ದ ಸಂದರ್ಭ, ನಾನು ಒಂದು ಮಾತನ್ನು ಹೇಳಿದ್ದೆ. ನಾವು ಮಾಡುವ ಗಣೇಶೋತ್ಸವಕ್ಕೆ ನೀವು ತೊಂದರೆ ಕೊಟ್ಟಿದ್ದೀರಿ. ಒಂದು ವೇಳೆ ನಿಮ್ಮದೇ ಕಾರ್ಯಕ್ರಮ ರಸ್ತೆಯಲ್ಲಿ ಹೋಗುವಾಗ ಹಿಂದು ಸಮಾಜ ನಿಲ್ಲಿಸಿದರೆ ಏನಾಗಬಹುದು ಎಂದು ಪ್ರಶ್ನೆ ಮಾಡಿದ್ದೆ. ಆ ಪ್ರಶ್ನೆ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದರು. ಆದರೆ ಇವತ್ತು ತಾಕತ್ತಿದ್ದರೆ, ಬಿ.ಸಿ.ರೋಡಿಗೆ ಬನ್ನಿ, ನಮ್ಮ ಮೆರವಣಿಗೆ ಹೋಗುತ್ತದೆ. ತಾಕತ್ತಿದ್ದರೆ ಅದನ್ನು ತಡೆಯಿರಿ ಎಂಬ ಸವಾಲನ್ನು ಹಾಕಿದ್ದಾರೆ. ಇದು ನನಗೆ ಹಾಕಿದ ಸವಾಲಲ್ಲ. ಇಡೀ ನಮ್ಮ ಕರಾವಳಿಯ ಹಿಂದು ಸಂಘಟನೆಗಳಿಗೆ ಹಾಕಿದ ಸವಾಲಾಗಿದೆ. ಹಾಗಾಗಿ ಆ ಸವಾಲಿಗೆ ಉತ್ತರ ಕೊಡಲು ಸಾವಿರಾರು ಸಂಖ್ಯೆಯಲ್ಲಿ ನಾವು ಬಂದಿದ್ದೇವೆ ಎಂದರು.

ಜೈ‌ಕಾರ ಘೋಷಣೆ ಕೂಗಿದ ಕಾರ್ಯಕರ್ತರು ಪೋಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಪ್ರತಿಭಟನಾಕಾರರು ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟವು ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು.

ಬೆಳಗ್ಗಿನಿಂದಲೇ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಹಿಂದು ಸಂಘಟನೆಯ ಕಾರ್ಯಕರ್ತರ ಜಮಾವಣೆ ಆಗುತ್ತಿತ್ತು. ಅದೇ ವೇಳೆ ಬ್ಯಾರಿಕೇಡ್ ಹಾಕುವ ಮೂಲಕ ಪೊಲೀಸರು ಬಂದೋಬಸ್ತ್ ಕೈಗೊಂಡರು.

ಬಂಟ್ವಾಳ ಮಾಜಿ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಮತ್ತು ಹಸೈನಾರ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ