ಆ.1ರಿಂದ ಕ್ವಿಂಟಲ್‌ಗೆ 50 ರೂ.ನಂತೆ ಪಶುಆಹಾರಕ್ಕೆ ಸಬ್ಸಿಡಿ – ಸುಚರಿತ ಶೆಟ್ಟಿ

ಮಂಗಳೂರು : ಲಾಭವಿಲ್ಲದ ಹೈನುಗಾರಿಕೆಯಿಂದಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ದ‌ನ ಸಾಕಣೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಆ.1ರಿಂದ ಕ್ವಿಂಟಾಲ್‌ವೊಂದಕ್ಕೆ 50 ರೂ.ನಂತೆ ಪಶು ಆಹಾರಕ್ಕೆ ಸಬ್ಸಿಡಿ ನೀಡಲಿದೆ ಎಂದು ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಕುಲಶೇಖರದಲ್ಲಿರುವ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಮಾತನಾಡಿದ ಅವರು, ಸದ್ಯ ಪಶುಆಹಾರದ 50 ಕೆಜಿಯ ಬ್ಯಾಗ್‌ಗೆ 1,350 ರೂ. ದರವಿದೆ. ಬ್ಯಾಗ್‌ಗೆ 25 ರೂ.ನಂತೆ ಎರಡು ಬ್ಯಾಗ್‌ನ ಒಂದು ಕ್ವಿಂಟಾಲ್‌ಗೆ 50 ರೂ.ನಂತೆ ಸಬ್ಸಿಡಿಯನ್ನು ಹೈನುಗಾರರಿಗೆ ಒದಗಿಸಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ಧಾರದಂತೆ, ತಿಂಗಳಿಗೆ 30 ಲಕ್ಷ ರೂ. ವೆಚ್ಚವನ್ನು ಭರಿಸಲಿದೆ ಎಂದರು.

ಬರಗಾಲ, ಹಸಿರು ಹುಲ್ಲಿನ ಕೊರತೆಯಿಂದ ಈ ಬಾರಿ ಹಾಲಿನ ಉತ್ಪಾದನೆ ಜನವರಿ, ಫೆಬ್ರವರಿ ತಿಂಗಳಿಗೆ 3.15 ಲಕ್ಷ ಲೀಟರ್‌ಗೆ ಇಳಿದಿದೆ. ಕಳೆದ ಮಾರ್ಚ್‌ನಿಂದ ಜೂನ್ ವರೆಗೆ ತಿಂಗಳಿಗೆ ತಲಾ 400 ಟನ್‌ನಂತೆ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗಿತ್ತು. ಇದರಿಂದ 40 ಲಕ್ಷ ರೂ. ಹೊರೆ ಒಕ್ಕೂಟ ಭರಿಸಿದೆ. ಈ ವ್ಯವಸ್ಥೆಯಿಂದಾಗಿ ಹಾಲಿನ ಉತ್ಪಾದನೆ ದಿನಕ್ಕೆ 3.86 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು ಎಂದರು.

ಹಸಿರು ಹುಲ್ಲಿನ ಕೊರತೆ, ಪಶು ಆಹಾರದ ವೆಚ್ಚ ಸೇರಿದಂತೆ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಜನರು ಆಸಕ್ತಿ ತೋರುವುದಿಲ್ಲ. ಆದ್ದರಿಂದ ಲೀಟರೊಂದಕ್ಕೆ ಹಾಲು ಉತ್ಪಾದಕರಿಗೆ ಕನಿಷ್ಠ 5 ರೂ. ಹೆಚ್ಚುವರಿ ಹಣ ದೊರಕಿದರೆ ಹೈನುಗಾರಿಕೆ ವ್ಯವಸ್ಥೆಯನ್ನು ಉಳಿಸಲು ಸಾಧ್ಯವಾಗಬಹುದು ಎಂದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ