ಉಡುಪಿ : ತಾನು ದಕ್ಷ ಅಧಿಕಾರಿ ಎಂದು ಬಿಂಬಿಸುತ್ತಿರುವ ಜಿಲ್ಲಾ ಎಸ್ಪಿ ಡಾ.ಅರುಣ್ ಜಿಲ್ಲೆಯಲ್ಲಿ ನಡೆದ ಕೊಲೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾದ ಅವರು ಸುಮೊಟೋ ಪ್ರಕರಣ ದಾಖಲಿಸಿ, ಪ್ರತಿಭಟಿಸುವವರ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ನಾಚಿಕೆಗೇಡು ಎಂದು ಹೈಕೋರ್ಟ್ ವಕೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಆರೋಪಿಸಿದ್ದಾರೆ.
ಮಲ್ಪೆ ಠಾಣೆಯಲ್ಲಿ ರಾಜಿಯಾದ ಪ್ರಕರಣದಲ್ಲಿ ತನಿಖೆಗೆಂದು ಕರೆಸಿ, ಕುತಂತ್ರದಿಂದ ಮಹಿಳಾ ಮೀನುಗಾರರು ಹಾಗು ಪುರುಷ ಮೀನುಗಾರರನ್ನು ಬಂಧಿಸಲಾಗಿದೆ. ಅವರ ಪರವಾಗಿ ಧ್ವನಿಎತ್ತಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ದ ಸುಮೊಟೋ ದಾಖಲಿಸಿದ್ದೀರಿ. ಯಾರೋ ಅಮಾಯಕ ಪಿಎಸ್ಐಗಳನ್ನು ದಬಾಯಿಸಿ ಸುಮೊಟೋ ದೂರು ದಾಖಲಿಸುವ ತಾವು ಕಚೇರಿ ಬಿಟ್ಟು ಹೊರಗೆ ಬರಬೇಡಿ. ನೀವು ಮಾಡುವುದನ್ನೆಲ್ಲಾ ಒಪ್ಪಿಕೊಳ್ಳುತ್ತೇವೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದಿದ್ದಾರೆ.
ಜಿಲ್ಲಾ ಎಸ್ಪಿ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸಲು ತಾವು ಅರ್ಹರೇ..? ಕೇವಲ ಸುಮೊಟೋ ಪ್ರಕರಣ ದಾಖಲಿಸಿ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವ ತಾವು ತಮ್ಮ ಇಲಾಖೆಯಲ್ಲಿನ ಯಾವುದಾದರೂ ಅಕಾಡೆಮಿ ಹುದ್ದೆಯನ್ನು ಅಲಂಕರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.