ಉಡುಪಿ : ಯುದ್ಧಕಾಲದಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಬವಣೆಗಳನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಶ್ಲಾಘನೀಯ. ಇದರಿಂದ ಈ ಜನಾಂಗ ಮುಖ್ಯವಾಹಿನಿಯಲ್ಲಿ ಬರಲು ಅವಕಾಶವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಕುಂಜಿಬೆಟ್ಟು ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷರಂಗಾಯಣ ಕಾರ್ಕಳ ಆಶ್ರಯದಲ್ಲಿ ಶುಕ್ರವಾರ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ‘ಗೋರ್ ಮಾಟಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾಟಕ ಅತ್ಯುತ್ತಮವಾಗಿ ಮೂಡಿಬಂದಿದ್ದು, ಸಮಾಜ ಬಂಜಾರ ಜನಾಂಗದವರನ್ನು ಗುರುತಿಸಲು ಸಹಾಯಕವಾಗಿದೆ. ಮುಂದಿನ ದಿನಗಳಲ್ಲಿ ಈ ಸಮುದಾಯದಿಂದ ಹೆಚ್ಚಿನ ಸಾಧಕರು ಮೂಡಿಬರಲಿ ಎಂದರು.
ಯಕ್ಷರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ, ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ, ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ ಉಪಸ್ಥಿತರಿದ್ದರು.