ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶವವಾಗಿ ಪತ್ತೆ; ಚಿರತೆ ದಾಳಿ ಶಂಕೆ?

ಮಣಿಪಾಲ : ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಇಂದು ಬೆಳ್ಳಿಗ್ಗೆ ಮನೆಯ ಎದುರಿನ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ‌. ಅವರ ಮೃತದೇಹದ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ.

ಇವರು‌ ನಿನ್ನೆ ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ವಾಪಾಸು ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶವ ಪತ್ತೆಯಾಗಿದೆ‌. ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾಯಗಳಾಗಿವೆ ಎಂದು ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.
ಈ ಭಾಗದಲ್ಲಿ ಚಿರತೆ ಹಾವಳಿ ಕೂಡ ಹೆಚ್ಚಾಗಿದೆ. ಹೀಗಾಗಿ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದಾರೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !