ಪುತ್ತೂರಿನಲ್ಲೊಂದು ಅಮಾನವೀಯ ಕೃತ್ಯ; ಕೆಲಸ ಮಾಡುವಲ್ಲಿ ಮೃತಪಟ್ಟ ಕೂಲಿ ಕಾರ್ಮಿಕನ ಮೃತದೇಹವನ್ನು ಮನೆಮುಂಭಾಗದ ರಸ್ತೆಯಲ್ಲಿ ಇಟ್ಟುಹೋದ ಕಟುಕರು

ಪುತ್ತೂರು : ಕೆಲಸ ಮಾಡುತ್ತಿದ್ದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರೊಬ್ಬರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ(69) ಮೃತಪಟ್ಟ ಕೂಲಿ ಕಾರ್ಮಿಕ.

ಪುತ್ತೂರು ತಾಲೂಕಿನ ಚಿಕ್ಕಮುನ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ಎಂಬಲ್ಲಿ ಈ ಘಟನೆ ಶನಿವಾರ ನಡೆದಿದೆ. ಶಿವಪ್ಪರನ್ನು ಶನಿವಾರ ಬೆಳಗ್ಗೆ ಸಾಲ್ಮರ ತ್ರಾವೋ ಇಂಡಸ್ಟ್ರೀಸ್‌ನ ಹೆನ್ರಿ ತ್ರಾವೋ ಎಂಬವರು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದೊಯ್ದಿದ್ದರು ಎನ್ನಲಾಗಿದೆ. ಆದರೆ ಕೆಲಸದ ಸ್ಥಳದಲ್ಲಿ ಶಿವಪ್ಪರಿಗೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದ್ದರಿಂದ ಮಧ್ಯಾಹ್ನ ವೇಳೆ ಪಿಕಪ್‌ನಲ್ಲಿ ಶಿವಪ್ಪರನ್ನು ಕರೆತಂದು ಅವರ ಮನೆಯ ಮುಂಭಾಗದಲ್ಲಿನ ರಸ್ತೆಯಲ್ಲಿ ಮಲಗಿಸಿ ತೆರಳಿದ್ದಾರೆ.‌ ಮನೆಯವರು ತಕ್ಷಣ ಅಲ್ಲಿಗೆ ತೆರಳಿ ನೋಡಿದ್ದಾರೆ‌. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮನೆಯೊಳಗಡೆ ತಂದಿದ್ದೇವೆ ಎಂದು ಶಿವಪ್ಪರ ಪುತ್ರಿ ಉಷಾ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉಷಾ ನೀಡಿದ ದೂರಿನ್ವಯ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಅಮಾನವೀಯ ಘಟನೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ರವಿವಾರ ಪುತ್ತೂರು ನಗರ ಠಾಣೆಯ ಎದುರು ಪ್ರತಿಭಟನೆ ನಡೆಸಿದೆ. ಬಳಿಕ ಪೊಲೀಸರು ಸಾಲ್ಮರದ ತಾವ್ರೋ ಇಂಡಸ್ಟ್ರೀಸ್‌ಗೆ ತೆರಳಿ ಮೃತದೇಹ ಸಾಗಾಟ ಮಾಡಿದ್ದರು ಎನ್ನಲಾಗಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ