ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಇರುವ ಬ್ಯಾಗನ್ನು ವಾರಸುದಾರರಿಗೆ ಹಸ್ತಾoತರಿಸಿ ಪ್ರಾಮಾಣಿಕತೆ ಮೆರೆದ ಯುವಕ

ಬೈಂದೂರು : ಯುವಕನೋರ್ವ ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವ ಬ್ಯಾಗನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನ. 11 ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಶಿರೂರಿನ ಯುವಕ ಅಬ್ದುಲ್ ಜಾವ್ವೆದ್ ಅವರು ನ. 11 ರಂದು ಬೆಳಿಗ್ಗೆ 6:30 ರ ಸಮಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಟ್ಕಳದಿಂದ ಶಿರೂರು ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಬ್ಯಾಗೊಂದನ್ನು ಕಂಡು ಬೈಕ್ ನಿಲ್ಲಿಸಿ ಬ್ಯಾಗನ್ನು ಎತ್ತಿಕೊಂಡು ಮನೆಗೆ ಬಂದು ಪರಿಶೀಲಿಸಿದಾಗ ಅದರಲ್ಲಿ ರೂ. 2.5 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದ್ದು ಬೇರೆ ಯಾವುದೇ ವಿಳಾಸಗಳು ಇದ್ದಿರುವುದಿಲ್ಲ. ಅಲ್ಲದೆ ಬ್ಯಾಗ್‌ನಲ್ಲಿ ಒಂದು ಹಾರ್ಡ್ ಡಿಸ್ಕ್ ಇರುವುದು ಕಂಡು ಬಂದಿದ್ದು ಅದನ್ನು ಪರಿಶೀಲಿಸಿದಾಗ ಒಂದು ಮೊಬೈಲ್ ನಂಬರ್ ದೊರಕಿದ್ದು ಅದರ ಆಧಾರದ ಮೇಲೆ ವಾರಸುದಾರರನ್ನು ಪತ್ತೆ ಹಚ್ಚಿ ಬ್ಯಾಗನ್ನು ಹಿಂದಿರುಗಿಸಿರುತ್ತಾರೆ.

ಕೇರಳದ ವಿನೋದ್ ಹಾಗೂ ಸ್ವಾತಿ ದಂಪತಿಗಳು ಕೊಲ್ಲೂರು ದೇವಸ್ಥಾನಕ್ಕೆ ಬೆಂಗಳೂರಿಂದ ಶಿರೂರಿಗೆ ರೈಲಿನಲ್ಲಿ ಬಂದಿದ್ದರು. ಸೋಮವಾರ ಮುಂಜಾನೆ ಶಿರೂರು ರೈಲ್ವೆ ಸ್ಟೇಷನ್‌ನಲ್ಲಿ ಇಳಿದು ಆಟೋ ರಿಕ್ಷಾವೊಂದರಲ್ಲಿ ಬೈಂದೂರು ಕಡೆಗೆ ಹೋಗುತ್ತಿದ್ದ ವೇಳೆ ಶಿರೂರಿನ ಕರಿಕಟ್ಟೆ ಎಂಬಲ್ಲಿ ಟ್ರಾಲಿ ಮೇಲೆ ಇರಿಸಿದ್ದ ಬ್ಯಾಗ್ ಜಾರಿ ಕೆಳಗೆ ಬಿದ್ದಿರುತ್ತದೆ.

ಅದೇ ದಾರಿಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಶಿರೂರು ಅಬ್ದುಲ್ ಜಾವ್ವೆದ್ ಅವರಿಗೆ ಅನಾಥವಾಗಿ ಬಿದ್ದಿದ್ದ ಬ್ಯಾಗ್‌ನ್ನು ಕಂಡು ಅದನ್ನು ಎತ್ತಿಕೊಂಡು ಮನೆಗೆ ಹೋಗಿ ಪರಿಶೀಲಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಇಲೆಕ್ಟ್ರಾನಿಕ್ ವಸ್ತುಗಳಿರುವುದು ಕಂಡು ಬಂದಿದೆ. ಅಲ್ಲದೆ ವಾರಿಸುದಾರರನ್ನು ಸಂಪರ್ಕಿಸಲು ಯಾವುದೇ ವಿಳಾಸ ಇಲ್ಲದೆ ಕೊನೆಗೆ ಅದರಲ್ಲಿ ಇದ್ದ ಹಾರ್ಡ್ ಡಿಸ್ಕ್‌ನಲ್ಲಿರುವ ಮೊಬೈಲ್ ನಂಬರ್‌ನಿಂದ ಕೇರಳ ದಂಪತಿಗಳನ್ನು ಪತ್ತೆ ಹಚ್ಚಿ ರಸ್ತೆಯಲ್ಲಿ ಸಿಕ್ಕಿದ 2.5 ರೂ. ಲಕ್ಷ ಮೌಲ್ಯದ ಚಿನ್ನ ಇರುವ ಬ್ಯಾಗನ್ನು ಬೈಂದೂರು ಪೊಲೀಸ್ ಸ್ಟೇಷನ್‌ಗೆ ನೀಡಿ ಪೊಲೀಸರ ಸಮ್ಮುಖದಲ್ಲೇ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಅಬ್ದುಲ್ ಜಾವ್ವೆದ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ