ಒಂದು ಭಾವನಾತ್ಮಕ ಪುನರ್ಮಿಲನ : ಕೊನೆಗೂ ಮಗನ ಸೇರಿದ ತಾಯಿ

ಉಡುಪಿ : ಕಳೆದ 20 ದಿನಗಳ ಹಿಂದೆ ಉಡುಪಿಯಲ್ಲಿ ರಾತ್ರಿ ಹೊತ್ತು ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿಯವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಬಳಿಕ “ಸಖಿ” ಕೇಂದ್ರಕ್ಕೆ ದಾಖಲಿಸಿದ್ದರು. ಇದೀಗ “ಸಖಿ” ಕೇಂದ್ರದ ನೆರವಿನಿಂದ ಮಗನಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮಹಿಳೆ ಕಮಲಮ್ಮ (50) ಮೂಲತಃ ಹುಬ್ಬಳ್ಳಿಯವರಾಗಿದ್ದು ಕೆಲವು ದಿನಗಳಿಂದ ಉಡುಪಿ ನಗರದಲ್ಲಿ ಸುತ್ತಾಡಿಕೊಂಡು ಅಸಹಾಯಕರಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು. ರಾತ್ರಿ ಹೊತ್ತು ರಸ್ತೆ ಬದಿ ದುಃಖದಿಂದ ಇದ್ದ ಇವರನ್ನು ವಿಶು ಶೆಟ್ಟಿಯವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು.

15 ದಿನಗಳ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆಯನ್ನು ವಿಶು ಶೆಟ್ಟಿಯವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕುಟುಂಬಿಕರ ಪತ್ತೆಯಾಗದ ಹಿನ್ನೆಲೆಯಲ್ಲಿ “ಸಖಿ” ಕೇಂದ್ರಕ್ಕೆ ದಾಖಲಿಸಿದ್ದರು. ಮಹಿಳೆ ನೀಡಿದ ಮಾಹಿತಿ ಮೇರೆಗೆ ಮನೆಯವರ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಿತ್ತರಿಸಲಾಗಿತ್ತು. “ಸಖಿ “ಕೇಂದ್ರದ ಸಿಬ್ಬಂದಿಗಳು ಮಹಿಳೆ ನೀಡಿದ ಮಾಹಿತಿಯ ಅನುಸಾರ ಹುಬ್ಬಳ್ಳಿ ಧಾರವಾಡದಲ್ಲಿ ಮನೆಯವರ ಪತ್ತೆಗಾಗಿ ಪ್ರಯತ್ನಿಸಿ ಕುಟುಂಬಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಮಹಿಳೆಯ ಮಗ ಹುಬ್ಬಳ್ಳಿಯಿಂದ ಉಡುಪಿಗೆ ಬಂದು ತಾಯಿಯನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ವಿಶು ಶೆಟ್ಟಿ ಭರಿಸಿದ್ದರು. ಮಹಿಳೆ ಮನೆ ಬಿಟ್ಟು ಎರಡು ತಿಂಗಳಾಗಿದ್ದು ಕುಟುಂಬಸ್ಥರು ತುಂಬಾ ಹುಡುಕಾಟ ನಡೆಸಿದ್ದು, ಇದೀಗ ತಾಯಿಯನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !