ಮಂಗಳೂರು: ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ 11ನೇ ವರ್ಷದ ಸಂಭ್ರಮದಲ್ಲಿದ್ದು ವಿಶೇಷ ಸಂಚಿಕೆಯನ್ನು ಬಂಟ್ವಾಳ ಎಸ್‌ವಿಎಸ್ ದೇವಳ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ್ ಆಳ್ವ ಬಿಡುಗಡೆಗೊಳಿಸಿದರು.
ಬಳಿಕ ಮಾತಾಡಿದ ಅವರು, “ನಮ್ಮ ಸಂಸ್ಥೆಯ ವಿದ್ಯಾರ್ಥಿ ಆಗಿದ್ದಾಗಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡಿದ್ದ ಮಾಲತಿ ಶೆಟ್ಟಿ ಅವರು ಜಾಗತೀಕರಣದ ಈ ವೇಳೆಯಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ. ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಪ್ರಯತ್ನ ಪಟ್ಟಾಗ ಮಾತ್ರ ಕನ್ನಡಕ್ಕೆ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಕಳೆದ 10 ವರ್ಷಗಳಲ್ಲಿ 40 ಪುಸ್ತಕ ಬಿಡುಗಡೆ, 101 ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರು ಕನ್ನಡ ಭಾಷೆ ಉಳಿವಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು.
ಭುವನಾಭಿರಾಮ ಉಡುಪ ಮಾತನಾಡಿ, “ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಮಾಲತಿ ಶೆಟ್ಟಿ ಮತ್ತವರ ತಂಡಕ್ಕೆ ಅಭಿನಂದನೆಗಳು” ಎಂದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, “ಕನ್ನಡವನ್ನು ನಾವೇ ಉಳಿಸಬೇಕು. ಯಾಕೆಂದರೆ ಎಷ್ಟೋ ಶಾಲೆಗಳು ಮುಚ್ಚುವ ಹಂತದಲ್ಲಿವೆ, ಶಿಕ್ಷಕರಿಗೆ ಸಂಬಳ ಸಿಗುತ್ತಿಲ್ಲ. ನಾವು ಭಾಷೆಯನ್ನು ಉಳಿಸಿ ಬೆಳೆಸಲು ನಿರಂತರ ದುಡಿಯಬೇಕು” ಎಂದರು.
ವೇದಿಕೆಯಲ್ಲಿ ಮಾಲತಿ ಶೆಟ್ಟಿ ಮಾಣೂರು, ಸತ್ಯಪ್ರಕಾಶ್ ಶೆಟ್ಟಿ, ಸಾಹಿತಿ ಡಾ.ಅರುಣಾ ನಾಗರಾಜ್, ಸುರೇಖಾ ಯಳವಾರ ಮತ್ತಿತರರು ಉಪಸ್ಥಿತರಿದ್ದರು.