ಪುಂಡರಿಗೆ ಕ್ಷಮಾದಾನ ಅಲ್ಪಸಂಖ್ಯಾತರ ಕಲ್ಯಾಣವೇ? – ವಿ ಸುನಿಲ್ ಕುಮಾರ್ ಪ್ರಶ್ನೆ

ಕಾರ್ಕಳ : ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಎಚ್.ಕೆ. ಪಾಟೀಲ್ ಅವರೇ, ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧದ ಪ್ರಕರಣ ವಾಪಾಸ್ ತೆಗೆದುಕೊಳ್ಳುವ ಸಂಪುಟ ನಿರ್ಧಾರ ಖಂಡಿಸಿ ನೀವು ಮೊದಲು ರಾಜೀನಾಮೆ ಕೊಡಬೇಕಿತ್ತು.

ನೆಲದ ಕಾನೂನು‌ ಉಲ್ಲಂಘಿಸಲು ಮುಂದಾದ ಸಂಪುಟ ಸಹೋದ್ಯೋಗಿಗಳನ್ನು ಹಿರಿಯರಾಗಿ, ಕಾನೂನು ಪರಿಣತರಾಗಿ ಕಿವಿ ಹಿಂಡಿ ಬುದ್ಧಿ ಹೇಳಬೇಕಿತ್ತು. ಆದರೆ ಅದನ್ನು ಬಿಟ್ಟು ದೊಂಬಿ ಸೃಷ್ಟಿಸಿದವರ ವಿರುದ್ಧದ ಪ್ರಕರಣ ಕೈ ಬಿಟ್ಟಿದ್ದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮ ಎಂಬ ಹೊಸ ವ್ಯಾಖ್ಯಾನಕ್ಕೆ ಹೊರಟಿದ್ದೀರಿ. ಇದು ನಿಮ್ಮ ಹತಾಶೆ ಹಾಗೂ ಅಸಹಾಯಕ ಸ್ಥಿತಿಯ ಧ್ಯೋತಕವಾಗಿದೆ. ಆರೋಪಪಟ್ಟಿ ಸಲ್ಲಿಕೆಯಾದ ಗಂಭೀರ ಪ್ರಕರಣಗಳನ್ನು ಅಭಿಯೋಜನೆಯಿಂದ ಕೈ ಬಿಡುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಣಕ ಎಂಬ ಕನಿಷ್ಠ ಪ್ರಜ್ಞೆಯೂ ನಿಮಗಿಲ್ಲವಾಯ್ತೇ ? ಅಥವಾ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಲ್ಲು ತೂರುವ ಹಾಗೂ ಬೆಂಕಿ ಹಚ್ಚುವ ವರ್ಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ರಾಷ್ಟ್ರೀಯ ಕಾರ್ಯಕ್ರಮ ಸಂಬಂಧ ತಾವು ಖಾಸಗಿ ವಿಧೇಯಕ ತರುವುದಕ್ಕೆ ಹೊರಟಿದ್ದೀರೋ ?

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬೇಕಾದರೆ ನಿಮ್ಮ ಕ್ಷೇತ್ರದಲ್ಲಿ ಸಾಮೂಹಿಕ ಶಾದಿಭಾಗ್ಯ ಕಾರ್ಯಕ್ರಮ ಆಯೋಜಿಸಿ. ಅದನ್ನು ಬಿಟ್ಟು ಪುಂಡರಿಗೆ ಕಾನೂನು ರಕ್ಷಣೆ ಕೊಡುವುದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಎಂಬ ವ್ಯಾಖ್ಯಾನ ಮಾಡಿ ನಗೆಪಾಟಲಿಗೆ ಈಡಾಗಬೇಡಿ. ಇದು ನಿಮ್ಮ ಘನತೆಗೆ ತಕ್ಕುದಲ್ಲ. ಹುಲುಕೋಟಿ ಹುಲಿ ಪರಂಪರೆಯಿಂದ ಬಂದವರು ಬಿಲ ಸೇರಿದ ಇಲಿಯಾಗುವುದು ನಾಡು ಮೆಚ್ಚುವ ಬೆಳವಣಿಗೆಯಲ್ಲ ಸ್ವಾಮಿ ಎಂದು ಶಾಸಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ