ವಕ್ಫ್ ಮಸೂದೆಗೆ ತಿದ್ದುಪಡಿ ಪ್ರಜಾಪ್ರಭುತ್ವ ಪ್ರಕ್ರಿಯೆ : ಅಣ್ಣಾಮಲೈ

ಉಡುಪಿ : ವಕ್ಫ್ ಕಾಯ್ದೆಗೆ ಆಗುತ್ತಿರುವ ತಿದ್ದುಪಡಿಗಳು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಅವರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಕ್ಟ್‌ಗೆ ಕಾಲಕಾಲಕ್ಕೆ ಅನೇಕ ತಿದ್ದುಪಡಿಗಳು ಆಗುತ್ತಲೇ ಬಂದಿವೆ. 1995ರಲ್ಲಿ ಅತಿ ದೊಡ್ಡ ತಿದ್ದುಪಡಿ ನಡೆದಿದೆ. ನಂತರ 2013ರಲ್ಲಿ ಕಾಂಗ್ರೆಸ್ ಸರ್ಕಾರವು ದೊಡ್ಡ ಮಟ್ಟದ ತಿದ್ದುಪಡಿ ತಂದಿತ್ತು. ಈಗ 2025ರಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ತಿದ್ದುಪಡಿಗಳು ಸಹಜವಾಗಿದ್ದು, ಜನರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಕ್ಫ್ ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದ್ದು, ಸುಮಾರು 39 ಲಕ್ಷ ಎಕರೆಗಳಷ್ಟಿದೆ. ರೈಲ್ವೆ ಇಲಾಖೆಯು ಕೇವಲ 52 ಲಕ್ಷ ಎಕರೆ ಭೂಮಿಯನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ 21 ಲಕ್ಷ ಎಕರೆ ಭೂಮಿ ವಕ್ಫ್‌ಗೆ ಸೇರ್ಪಡೆಯಾಗಿದೆ. 2013ರವರೆಗೆ ಕೇವಲ 18 ಲಕ್ಷ ಎಕರೆ ಇತ್ತು. ಈ ಭೂಮಿಗಳಿಗೆ ಸಂಬಂಧಿಸಿದಂತೆ ಯಾರೂ ಬಂದು ಇದು ತಮ್ಮದು ಎಂದು ಹೇಳುವಂತಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಬಹಳ ಅದ್ಭುತವಾದ ಬದಲಾವಣೆಗಳೊಂದಿಗೆ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಇದರಿಂದ ಇಸ್ಲಾಂ ಧರ್ಮದ ಸಹೋದರಿಯರು, ತಾಯಂದಿರು ಹಾಗೂ ಬಡ ಮುಸ್ಲಿಮರಿಗೆ ಅನುಕೂಲವಾಗಲಿದೆ. ಈ ಹಿಂದೆ ಕೇವಲ ಶಿಯಾ ಮತ್ತು ಸುನ್ನಿ ಮುಸ್ಲಿಮರನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಅಘಾಖಾನ್ ಮುಸ್ಲಿಂ ಮತ್ತು ಬೋರ ಮುಸ್ಲಿಮರಿಗೂ ಅವಕಾಶ ಸಿಕ್ಕಿದೆ. ಇದು ಯಾವುದೇ ರೀತಿಯಿಂದಲೂ ಸಂವಿಧಾನ ವಿರೋಧಿಯಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದು, ಎಲ್ಲಾ ಕೇಸುಗಳು ವಜಾಗೊಳ್ಳಲಿವೆ ಎಂದು ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದರು..

ಗ್ಯಾಸ್ ದರ ಏರಿಕೆಗೆ ಅಂತರಾಷ್ಟ್ರೀಯ ಕಾರಣ

ಗ್ಯಾಸ್ ದರ ಏರಿಕೆಯ ಕುರಿತು ಮಾತನಾಡಿದ ಅಣ್ಣಾಮಲೈ ಅವರು, ಕಾಂಗ್ರೆಸ್ ಪಕ್ಷದಲ್ಲಿ ಆರ್ಥಿಕ ತಜ್ಞರಿದ್ದಾರೆ, ಅವರು ಈ ಬಗ್ಗೆ ಮಾತನಾಡಬೇಕು. ಆದರೆ ಕಾಂಗ್ರೆಸ್‌ನ ಆರ್ಥಿಕ ತಜ್ಞರು ಸತ್ಯವನ್ನು ಹೇಳುವುದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ದರ ಏರಿಕೆಯಾಗಿದೆ. ಒಂದು ಹಂತದ ನಂತರ ತೈಲ ಮಾರುಕಟ್ಟೆ ಕಂಪನಿಗಳಿಗೂ ಕಷ್ಟವಾಗುತ್ತದೆ. ಆಗ ದರ ಏರಿಕೆ ಅನಿವಾರ್ಯವಾಗುತ್ತದೆ. ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವಾಗ ಸರ್ಕಾರ ಮಧ್ಯಪ್ರವೇಶಿಸಿ ಏರಿಕೆಯಾಗದಂತೆ ನೋಡಿಕೊಂಡಿದೆ. ಗ್ಯಾಸ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದ್ದು, ನಮ್ಮಲ್ಲಿ ಉತ್ಪಾದನೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಗ್ಯಾಸ್ ಬಳಕೆ ಹೆಚ್ಚಾಗಿದೆ. ಒಂದು ಹಂತದ ನಂತರ ತೈಲ ಮಾರುಕಟ್ಟೆ ಕಂಪನಿಗಳಿಗೆ ನಷ್ಟವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಜನರಿಗೆ ಹೊರೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ. ಈಗಿನ ಪರಿಸ್ಥಿತಿ ತಾತ್ಕಾಲಿಕ ಎಂದು ಭಾವಿಸುತ್ತೇನೆ.

ಮೋದಿ ಸರ್ಕಾರ ಬಂದ ನಂತರ ಗ್ಯಾಸ್ ಬಳಕೆ ಹೆಚ್ಚಾಗಿದೆ. 2014ರಲ್ಲಿ ಭಾರತದಲ್ಲಿ ಶೇಕಡ 64 ಜನರಷ್ಟೇ ಗ್ಯಾಸ್ ಬಳಸುತ್ತಿದ್ದರು. ಇಂದು ಶೇಕಡ 100ರಷ್ಟು ಜನರು ಗ್ಯಾಸ್ ಬಳಸುತ್ತಿದ್ದಾರೆ. ಹೀಗಾಗಿ ಗ್ಯಾಸ್ ಅನ್ನು ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಕೇಂದ್ರ ಸರ್ಕಾರದ ಜೊತೆಗಿರಬೇಕು. ಹರದೀಪ್ ಪುರಿ ಅವರು ವಿಶ್ವಮಟ್ಟದಲ್ಲಿ ಗ್ಯಾಸ್ ಲಭ್ಯತೆಗಾಗಿ ಪ್ರಯತ್ನಿಸುತ್ತಿದ್ದಾರೆ. ಈಗಿನ ಪರಿಸ್ಥಿತಿ ತಾತ್ಕಾಲಿಕ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಜನ ವಿರೋಧಿ : ಅಣ್ಣಾಮಲೈ ಟೀಕೆ

ಕರ್ನಾಟಕ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅಣ್ಣಾಮಲೈ ಅವರು, ನಾನು ಕರ್ನಾಟಕ ಸರ್ಕಾರವನ್ನು ಹೊರಗಿನಿಂದ ನೋಡುತ್ತಿದ್ದೇನೆ. ಸರ್ಕಾರದಲ್ಲಿರುವ ಒಬ್ಬ ದೊಡ್ಡ ಮನುಷ್ಯ, ಒಬ್ಬ ಪವರ್‌ಫುಲ್ ವ್ಯಕ್ತಿ ಸಿಡಿ ಹನಿಟ್ರ್ಯಾಪ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕರ್ನಾಟಕದ ಜನರ ಸಂಸ್ಕೃತಿ ಶ್ರೀಮಂತವಾಗಿದೆ. ಆದರೆ ಈ ಸರ್ಕಾರ ಜನ ವಿರೋಧಿಯಾಗಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಇಡೀ ದೇಶ ನೋಡುತ್ತಿದೆ. ಜನಾಕ್ರೋಶ ಯಾತ್ರೆಯಲ್ಲಿ ಎಲ್ಲರೂ ಜನರೊಂದಿಗೆ ಕೈಜೋಡಿಸಬೇಕು. ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆ ಇಲ್ಲ. ಆದರೆ ಸರ್ಕಾರ ಜನರ ಪ್ರೀತಿಯನ್ನು ಕಳೆದುಕೊಂಡಿದೆ. ಜನರು ಪ್ರೀತಿ ಕೊಟ್ಟು ಬಿಜೆಪಿ ಜೊತೆ ಯಾತ್ರೆಯಲ್ಲಿ ಭಾಗವಹಿಸಬೇಕು. ರಾಜ್ಯದಿಂದ ಕಾಂಗ್ರೆಸ್ ಅನ್ನು ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಣ್ಣಾಮಲೈ ಕರೆ ನೀಡಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar