“ಅಂಬೇಡ್ಕರ್ ಸರ್ಕಲ್ ಹೆಸರಿಗೆ ಮಾತ್ರ” – ವಿವಿಧ ಸಂಘಟನೆಗಳ ಆಕ್ರೋಶ

ಮಂಗಳೂರು : ನಗರದ ಜ್ಯೋತಿ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಸಹಿತ ಸರ್ಕಲ್ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.

ಮೂಡ ಮಾಜಿ ಅಧ್ಯಕ್ಷ ತೇಜೋಮಯ ಮಾತನಾಡಿ, “ಮಂಗಳೂರಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಏನು ಮಾಡಿದೆ? ಮಹಾನ್ ಚೇತನ ಮಾನವತಾವಾದಿ ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಇನ್ನೂ ಆಡಳಿತವರ್ಗ ಮನಸ್ಸು ಮಾಡಿಲ್ಲ. ಜ್ಯೋತಿ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ“ ಎಂದರು.
”ಸ್ಮಾರ್ಟ್ ಸಿಟಿ ಇಂಜಿನಿಯರ್ ಸರ್ಕಲ್‌ನಲ್ಲಿ ವಾಹನಗಳ ಓಡಾಟಕ್ಕೆ ಸಾಕಷ್ಟು ಸ್ಥಳ ಇಲ್ಲ ಹೀಗಾಗಿ ಪ್ರತಿಮೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಆದರೆ ಈಗಿರುವ ಜಾಗದಲ್ಲೇ ಪ್ರತಿಮೆ ನಿರ್ಮಿಸಲು ನೀಲನಕ್ಷೆ ತಯಾರು ಮಾಡಿದಲ್ಲಿ ಯಾರಿಗೂ ಸಮಸ್ಯೆಯಾಗುವುದಿಲ್ಲ. ಗಾಂಧಿ, ನೆಹರು ಇನ್ನಿತರ ಮಹಾನುಭಾವರ ಪ್ರತಿಮೆ ನಿರ್ಮಿಸಲು ಇಲ್ಲಿ ಯಾವುದೇ ಸಮಸ್ಯೆಯಿಲ್ಲ. ಕೇವಲ ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಯಾಕೆ?“ ಎಂದು ಪ್ರಶ್ನಿಸಿದರು.

ಯೋಗೀಶ್ ಶೆಟ್ಟಿ ಮಾತಾಡಿ, ”ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದ ನಾವೆಲ್ಲರೂ ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದೇವೆ. ಮಂಗಳೂರಲ್ಲಿ ಜ್ಯೋತಿ ಸರ್ಕಲ್ ಅನ್ನು ಹೆಸರಿಗೆ ಮಾತ್ರ ಅಂಬೇಡ್ಕರ್ ಸರ್ಕಲ್ ಮಾಡಲಾಗಿದೆ. ಇದನ್ನು ಅಂಬೇಡ್ಕರ್ ಪ್ರತಿಮೆ ನಿಲ್ಲಿಸಿ ಹೆಸರಿಗೆ ಸೂಕ್ತವಾಗುವಂತೆ ಇಲ್ಲಿ ಸರ್ಕಲ್ ನಿರ್ಮಾಣ ಮಾಡಬೇಕು“ ಎಂದರು.

ವೇದಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಆದಿದ್ರಾವಿಡ ಸಂಘದ ಶಿವಾನಂದ, ಬಿರುವೆರ್ ಕುಡ್ಲ ಉಪಾಧ್ಯಕ್ಷ ಮಹೇಶ್, ಯೋಗೀಶ್ ಶೆಟ್ಟಿ ಜೆಪ್ಪು, ಲಕ್ಷ್ಮಣ್ ಕಾಂಚನ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು