ಉಡುಪಿ : ಅಲೈನ್ಸ್ ಕ್ಲಬ್ ಉಡುಪಿ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ವೈದ್ಯ ಡಾ.ಆರ್.ಎನ್. ಭಟ್ ಅವರನ್ನು ಸನ್ಮಾನಿಸಲಾಯಿತು.
ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರ ಉಡುಪಿ ನಗರದಲ್ಲಿರುವ ಕ್ಲಿನಿಕ್‌ನಲ್ಲಿ ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಹಾಗೂ ಪ್ರಸ್ತುತ ಅಲೈನ್ಸ್ ಜಿಲ್ಲೆ 275ರ ಅಡ್ವೈಸರ್ ಅಲೈ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಉಡುಪಿಯ ಜನಪ್ರಿಯ ವೈದ್ಯರಾಗಿರುವ ಡಾ.ಆರ್.ಎನ್. ಭಟ್ ಅವರು ಪ್ರತೀ ಶನಿವಾರ ತಮ್ಮ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಉಚಿತ ಸೇವೆಯನ್ನು ನೀಡುವ ಮೂಲಕ ಆದರ್ಶಪ್ರಾಯರಾಗಿದ್ದಾರೆ. ಇದರಿಂದ ಅದೆಷ್ಟೋ ಬಡ ರೋಗಿಗಳಿಗೆ ಅನುಕೂಲವಾಗಿದೆ. ಇಂತಹ ಮನೋಧರ್ಮವನ್ನು ವೈದ್ಯಲೋಕ ಬೆಳೆಸಿಕೊಂಡರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ವೈದ್ಯಕೀಯ ನೆರವು ಸಿಗುವುದರಲ್ಲಿ ಸಂಶಯವಿಲ್ಲ. ಡಾ. ಭಟ್ ಅವರನ್ನು ವೈದ್ಯರ ದಿನಾಚರಣೆಯಂದು ಗೌರವಿಸಲು ತುಂಬಾ ಸಂತೋಷವಾಗುತ್ತದೆ. ಅವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಆರ್.ಎನ್.ಭಟ್, ತನ್ನ ಈ ಸಮಾಜ ಸೇವೆಗೆ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರೇ ಪ್ರೇರಣೆಯಾಗಿದ್ದಾರೆ. 30 ವರ್ಷಗಳ ಹಿಂದೆಯೇ ಈ ಸೇವಾ ಕಾರ್ಯವನ್ನು ಪ್ರಾರಂಭಿಸಲು ನನಗೆ ನೆಲೆ ಕಲ್ಪಿಸಿರುತ್ತಾರೆ. ನಾವು 10 ವರ್ಷದ ಹಿಂದೆ ಉಚಿತ ಕ್ಯಾಂಪ್ ಮಾಡಿದ್ದೆವು. ಕೊರೊನಾ ಬಂದ ನಂತರ ಅದು ನಿಂತಿತ್ತು. ಇದೀಗ ಪ್ರತೀ ಶನಿವಾರ ಬಡರೋಗಿಗಳಿಗೆ ತಾನು ಉಚಿತ ತಪಾಸಣೆ, ಸಲಹೆ, ಉಚಿತ ಮೆಡಿಸಿನ್ ನೀಡುತ್ತೇನೆ. ಇದು ನಾನು ಪ್ರಾಕ್ಟಿಸ್ ಮಾಡುವವರೆಗೆ ಮುಂದುವರಿಯಲಿದೆ ಎಂದರು.
ಶ್ರೀ ಪೂರ್ಣ ಮೆಡಿಕಲ್‌ನ ಸುನೀಲ್ ಕುಮಾರ್ ಶೆಟ್ಟಿ ಅವರು ಡಾ.ಆರ್.ಎನ್.ಶೆಟ್ಟಿ ಅವರ ಸಮಾಜ ಸೇವೆಯನ್ನು ಶ್ಲಾಘಿಸಿ, ತನ್ನ ಮೆಡಿಕಲ್‌ನಲ್ಲಿ ಡಾ.ಆರ್.ಎನ್.ಭಟ್ ಅವರು ಶಿಫಾರಸ್ಸು ಮಾಡಿದ ಔಷಧಗಳಿಗೆ ಶೇ.10ರಷ್ಟು ರಿಯಾಯಿತಿಯನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಲೈನ್ಸ್ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್, ಅಡ್ವೈಸರ್ ಶ್ರೀಧರ ಡಿ. ಶೇಣವ, ಅಲೈನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಕೇಶವ ಅಮೀನ್, ಅಲೈ ಜಯನಂದ ಕೊಡವೂರು, ಅಲೈ ಡಾ. ಜಗದೀಶ ಹೊಳ್ಳ, ಅಲೈ ಜಯರಾಮ ಆಚಾರ್ಯ, ಅಲೈ ಚಂದ್ರಶೇಖರ ಆಳ್ವ ಹಾಗೂ ಥೆಲ್ಮಾ ಲೈಫ್ ಸಯನ್ಸ್ ನ ಪ್ರೊ.ಅಂಕಿತ್ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಅಡ್ವೈಸರ್ ಶ್ರೀಧರ ಡಿ. ಶೇಣವ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಹೊಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯರಾಮ ಆಚಾರ್ಯ ಧನ್ಯವಾದ ಸಮರ್ಪಿಸಿದರು.