ಅಪ್ರಾಪ್ತ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ – ಉಪನ್ಯಾಸಕ ದೋಷಮುಕ್ತ ಎಂದ ನ್ಯಾಯಾಲಯ

ಮಂಗಳೂರು : ನಗರದ ಕಾಲೇಜೊಂದರ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ.

‘ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕ ಕಾರ್ತಿಕ್ ನೋಟ್ಸ್ ನೋಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಕರೆಸಿಕೊಂಡಿದ್ದರು. ಬಳಿಕ ದೈಹಿಕ ಶಿಕ್ಷಣ ಕೊಠಡಿಗೆ ಕರೆದೊಯ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಿದ್ದಾರೆ‌. ಅಲ್ಲಿ ಬಟ್ಟೆಯನ್ನು ಕಳಚಿ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಬಳಿಕವೂ ಹಲವು ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು’ ಎಂದು ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿ ದೂರು ನೀಡಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್‌ ಆಯುಕ್ತ ಪಿ. ಎ. ಹೆಗಡೆ ಮತ್ತು ಎಸ್.ಮಹೇಶ್ ಕುಮಾ‌ರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ವಿವಾದವನ್ನು ಆಲಿಸಿದೆ. ಈ ವೇಳೆ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕಗಳಿಸಿದ್ದನ್ನು ಹಾಗೂ ಈ ಸಲುವಾಗಿ ಆರೋಪಿ ಉಪನ್ಯಾಸಕರು ಪೋಷಕರನ್ನು ಕಾಲೇಜಿಗೆ ಹಲವು ಬಾರಿ ಕರೆಸಿದ್ದನ್ನು ವಿದ್ಯಾರ್ಥಿಯು ನ್ಯಾಯಾಲಯದಲ್ಲಿ ಸಾಕ್ಷ್ಯಗಳ ವಿಚಾರಣಾ ಸಮಯದಲ್ಲಿ ಒಪ್ಪಿಕೊಂಡಿದ್ದ. ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿದ ಪ್ರಕರಣ ಸಂಬಂಧ ಪೋಷಕರನ್ನು ಕಾಲೇಜಿಗೆ ಕರೆಸಿದ್ದನ್ನೂ ಒಪ್ಪಿಕೊಂಡಿದ್ದ. ವಿದ್ಯಾರ್ಥಿಯನ್ನು ಪೊಲೀಸರು ಡ್ರಗ್ಸ್ ಸೇವನೆ ವಿಚಾರವಾಗಿ ವಿಚಾರಣೆ ಮಾಡಿ, ಎಚ್ಚರ ನೀಡಿದ ಕುರಿತು ಕಾಲೇಜಿನ ಪ್ರಾಂಶುಪಾಲರು ನ್ಯಾಯಾಲದಲ್ಲಿ ಹೇಳಿಕೆ ನೀಡಿದ್ದರು. ವಿದ್ಯಾರ್ಥಿ ಡ್ರಗ್ಸ್ ಸೇವನೆ ಮಾಡಿದ ಬಗ್ಗೆ ಆರೋಪಿ ಉಪನ್ಯಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಹಗೆಯಿಂದ ವಿದ್ಯಾರ್ಥಿಯು ಕತೆ ಕಟ್ಟಿ ಉಪನ್ಯಾಸಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ’ ಎಂದು ಆರೋಪಿ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಮಾಡಿ ವಾದಿಸಿದ್ದರು. ಆರೋಪಿ ಮೇಲಿನ ಆರೋಪ ಸುಳ್ಳು ಎಂದು ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿ‌ ಆದೇಶಿಸಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ