ಜನತೆ ಎಚ್ಚೆತ್ತುಕೊಳ್ಳದಿದ್ದಲ್ಲಿ ದಕ್ಷಿಣ ಭಾರತದ ಭಾಷೆಗಳೆಲ್ಲವೂ ನಶಿಸಲಿವೆ – ಡಾ.ಪುರುಷೋತ್ತಮ ಬಿಳಿಮಲೆ

ಕಾಸರಗೋಡು : ಬಹುಭಾಷಿಕ ಹಾಗೂ ಬಹುಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಿದಲ್ಲಿ ದೇಶ ಶೀಘ್ರವಾಗಿ ಹಿಂದಿಮಯವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೇರಳ ಮತ್ತು ಗೋವಾ ರಾಜ್ಯದ 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜಕಾರಣಿಗಳು ತಮ್ಮ ಉಳಿವಿಗಾಗಿ ಭಿನ್ನ ಭಾಷಿಕರ ನಡುವೆ ವೈಮನಸ್ಸು ಮೂಡಿಸುವ ಕೆಲಸ ಮಾಡುತ್ತಿದ್ದಾರೆ‌. ಇದು ಭಾಷೆಗಳ ಕಟ್ಟುವಿಕೆಗೆ ಮಾರಕವಾಗಿದೆ. ದಕ್ಷಿಣ ಭಾರತೀಯ ರಾಜ್ಯಗಳ ಭಾಷೆಗಳು ಹಾಗೂ ಹಿಂದಿ ಭಾಷೆಯ ಬೆಳವಣಿಗೆಯ ಇಂದಿನ ಗತಿಯನ್ನು ತುಲನೆ ಮಾಡಿದ್ದಲ್ಲಿ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಭಾಷೆಗಳು ಅವನತಿಯ ಕಡೆ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಸಂವಿಧಾನವು ಭಾಷಿಕವಾಗಿ ದೇಶದ ಜನರಿಗೆ ಹಲವಾರು ಹಕ್ಕುಗಳನ್ನು ಕೊಟ್ಟಿದೆ. ರಾಜ್ಯ ಸರ್ಕಾರಗಳು ಗಡಿಭಾಗಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರುಗಳ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕಿದೆ. ಆದರೆ ಹಲವು ರಾಜ್ಯಗಳು ಈ ಕುರಿತಂತೆ ಉತ್ಸುಕವಾಗಿಲ್ಲ. ಸರ್ಕಾರಗಳು ತಮ್ಮ ನಾಡಿನ ಅಲ್ಪಸಂಖ್ಯಾತ ಭಾಷೆಗಳ ಕುರಿತಂತೆ ಗೌರವ ಹೊಂದಬೇಕಾದ್ದು ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಕರ್ನಾಟಕದ ಎಲ್ಲ ನೆರೆ ರಾಜ್ಯಗಳ ಸರ್ಕಾರಗಳಿಗೆ ಸಂವಿಧಾನದತ್ತ ಅಧಿಕಾರದಂತೆ ಭಾಷಾ ನಿರ್ದೇಶಕರನ್ನು ನೇಮಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಲಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.

ಒಂದು ಲಕ್ಷ ಎಂಬತ್ತು ಸಾವಿರ ಕೋಟಿ ರೂ.ಗಳ ಆಯವ್ಯಯ ಗಾತ್ರ ಹೊಂದಿರುವ ಕೇರಳ ರಾಜ್ಯ ಅಲ್ಲಿನ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸದೆ ಇರುವುದು ಅಕ್ಷಮ್ಯ. ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಅಲ್ಪಸಂಖ್ಯಾತ ಕನ್ನಡಿಗರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್, ಸಾಹಿತಿ ಡಾ.ಜ್ಯೋತಿ ಚೇಳ್ಯಾರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಇಕ್ಬಾಲ್, ಜಿಪಂ ಸದಸ್ಯ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ಗುರುರಾಜ್ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭ ಎಲ್ಲಾ ಗಣ್ಯ ಅತಿಥಿಗಳು ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಕವಿ ಗೋವಿಂದ ಪೈಯವರು ವಾಸಿಸುತ್ತಿದ್ದ ಮನೆಗೆ ಭೇಟಿ ನೀಡಿದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ