ಡ್ರಗ್ಸ್ ಜಾಲ ಮಟ್ಟಹಾಕಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು : ಜಿಲ್ಲಾಧಿಕಾರಿ ಖಡಕ್ ಸೂಚನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಗಾಂಜಾವನ್ನು ಸಂಪೂರ್ಣವಾಗಿ ನಿಷೇಧಿಸಲು ಎಲ್ಲಾ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಲ್ಲೈ ಮುಗಿಲನ್ ಎಂ.ಪಿ. ಖಡಕ್ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ಚಟಕ್ಕೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೀಳುತ್ತಿರುವುದು ಕಳವಳಕಾರಿಯಾಗಿದೆ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಮಟ್ಟದಲ್ಲಿಯೇ ಆಂತರಿಕವಾಗಿ ನೋಡಲ್ ಆಫೀಸರ್, ಆಪ್ತ ಸಮಾಲೋಚಕರನ್ನು ನೇಮಿಸಿ ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸಬೇಕು. ಡ್ರಗ್ಸ್ ವ್ಯಸನಿಯಾಗಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಮಾಡಿ ವಿದ್ಯಾರ್ಥಿಯ ಮನ ಪರಿವರ್ತಿಸಬೇಕು. ವಿದ್ಯಾರ್ಥಿಗೆ ಯಾವ ಮೂಲದಿಂದ ಡ್ರಗ್ ಸಿಗುತ್ತಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಶಾಲಾ ಕಾಲೇಜುಗಳ ಹೆಸರಿಗೆ ಧಕ್ಕೆ ಉಂಟಾಗಬಹುದು ಎಂದು ಪ್ರಕರಣವನ್ನು ಮುಚ್ಚಿಡಬಾರದು ಎಂದರು. ಶಾಲಾ ಕಾಲೇಜುಗಳಿಗೆ ಆಗಿಂದಾಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂಚೆ ಕಚೇರಿಗೆ ಬರುವ ಪಾರ್ಸೆಲ್‍ಗಳು ಅನುಮಾನಾಸ್ಪದವಾಗಿ ತೋರಿ ಬಂದರೆ, ಪದೇ ಪದೇ ಒಂದೇ ರೀತಿಯಲ್ಲಿ ಪಾರ್ಸೆಲ್‍ಗಳು ಬರುತ್ತಿದ್ದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದಾರೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯವರು ತಪಾಸಣೆ ನಡೆಸಬೇಕು. ಡ್ರಗ್ಸ್ ನಿರ್ಮೂಲನೆಯಲ್ಲಿ ಪ್ರತಿಯೊಂದು ಇಲಾಖೆಯವರು ಜಂಟಿಯಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ವಾಟ್ಸಪ್ ಗ್ರೂಪ್‍ಗಳನ್ನು ರಚಿಸಿ, ವೇಳಾಪಟ್ಟಿಗಳನ್ನು ರಚಿಸಿ ಡ್ರಗ್ಸ್ ನಿರ್ಮೂಲನೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಪ್ರತಿ ತಿಂಗಳು ಅದರ ವರದಿಯನ್ನು ಒಪ್ಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಆರ್‌ಟಿಓ ಇಲಾಖೆಯಿಂದ ಎಲ್ಲಾ ಬಸ್‍ ಡ್ರೈವರ್ ಕಂಡಕ್ಟರ್‌ಗಳಿಗೆ ಡ್ರಗ್ಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಭೆ ನಡೆಸಬೇಕು. ಬಸ್‍ಗಳಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಅಂಟಿಸಬೇಕು. ಸಹಾಯವಾಣಿ ಸಂಖ್ಯೆ ನಂಬರ್ 1933 ಅನ್ನು ಅದರಲ್ಲಿ ನಮೂದಿಸಬೇಕು ಎಂದರು.

ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾದ ಪ್ರಕರಣಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಹೆಚ್ಚಾಗಿ ಕಂಡು ಬಂದಿದ್ದು ಡ್ರಗ್ಸ್‌ಗಳನ್ನು ಎಲ್ಲಿಂದ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು. ಅಪಾರ್ಟ್‍ಮೆಂಟ್‍ಗಳಲ್ಲಿ ಡ್ರಗ್ಸ್ ಬಗ್ಗೆ ಸಭೆಯನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿಸಿಪಿ, ಸಿದ್ದಾರ್ಥ್ ಗೋಯಲ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !