ಸತತ ಏಳು ಗಂಟೆ ಕಾರ್ಯಾಚರಣೆ ಬಳಿಕ ಮಣ್ಣಿನಡಿ ಸಿಲುಕಿದ ಕಾರ್ಮಿಕ ಮೃತದೇಹವನ್ನು ಮೇಲಕ್ಕೆತ್ತಿದ ರಕ್ಷಣಾ ತಂಡ

ಮಂಗಳೂರು : ಸತತ ಏಳು ಗಂಟೆ ಕಾರ್ಯಾಚರಣೆ ಬಳಿಕ ಬಲ್ಮಠದ ಬಳಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣಿನಡಿ ಸಿಲುಕಿದ್ದ ಮತ್ತೋರ್ವ ಕಾರ್ಮಿಕನ ಮೃತದೇಹವನ್ನು ರಕ್ಷಣಾ ತಂಡ ಮೇಲಕ್ಕೆತ್ತಿದೆ.

ಉತ್ತರಪ್ರದೇಶ ಮೂಲದ ಕಟ್ಟಡ ಕಾರ್ಮಿಕ ಚಂದನ್ ಕುಮಾರ್ (30)ನನ್ನು ಸತತ ಕಾರ್ಯಾಚರಣೆ ಮೂಲಕ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಮಣ್ಣಿನಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದೆ. ಆದರೆ ಆತನ ಮುಖದ ತುಂಬಾ ಗಾಯಗಳಾಗಿದ್ದು ರಕ್ತ ಒಸರಿ ಹೆಪ್ಪುಗಟ್ಟಿದಂತಿತ್ತು. ತಕ್ಷಣ ಆತನ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.

ಬುಧವಾರ 12.30 ಸುಮಾರಿಗೆ ನಿರ್ಮಾಣ ಹಂತದ ಕಟ್ಟಡದ ಬಳಿ ತಡೆಗೋಡೆಗೆ ವಾಟರ್ ಪ್ರೂಫಿಂಗ್ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದಿದೆ. ಈ ಮಣ್ಣಿನಡಿ ಇಬ್ಬರು ಕಾರ್ಮಿಕರ ಸಿಲುಕಿದ್ದಾರೆ. ಅದರಲ್ಲಿ ಬಿಹಾರ ಮೂಲದ ರಾಜ್‌ಕುಮಾರ್(18) ಎಂಬಾತನನ್ನು ಮಧ್ಯಾಹ್ನ 2.15ರ ಸುಮಾರಿಗೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ಚಂದನ್ ಕುಮಾರ್ ರಕ್ಷಣೆಗೆ ಸತತ ಕಾರ್ಯಾಚರಣೆ ನಡೆಸಿದರೂ, ರಕ್ಷಣೆ ಸುಲಭ ಸಾಧ್ಯವಾಗಿರಲಿಲ್ಲ.

ಕಾಂಕ್ರೀಟ್ ಸ್ಲ್ಯಾಬ್ ಅನ್ನು ರಂಧ್ರ ಕೊರೆದು ಮಣ್ಣಿನಡಿ ಸಿಲುಕಿರುವ ಚಂದನ್ ಕುಮಾರ್ ಅವರ ಇರವನ್ನು ಪತ್ತೆ ಮಾಡಲಾಯಿತು. 3.45ರ ಸುಮಾರಿಗೆ ಆತನ ಕೈ ರಂಧ್ರ ಕೊರೆದಿರುವ ಸ್ಲ್ಯಾಬ್ ನಿಂದ ಕಾಣಲುಸಿಕ್ಕಿದೆ. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ವೈದ್ಯರ ತಂಡ ಆತನ ಪಲ್ಸ್ ರೇಟ್ ತಪಾಸಣೆ ನಡೆಸಿದೆ. ಈ ವೇಳೆ ಆತನ ರಕ್ತದೊತ್ತಡದಲ್ಲಿ ಏರುಪೇರು ಕಂಡಿದೆ. ಆದ್ದರಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ಗ್ಲೋಕೋಸ್ ಅನ್ನು ಡ್ರಿಪ್ಸ್ ಮೂಲಕ ನೀಡಲಾಗಿದೆ. ಈ ವೇಳೆ ಆತನ ಪರಿಸ್ಥಿತಿ ಗಂಭೀರವಾಗಿರುವುದು ತಿಳಿದು ಬಂದಿದೆ.

ಪ್ರಥಮ ಚಿಕಿತ್ಸೆ ಬಳಿಕ ಮತ್ತೆ ಕಾಂಕ್ರೀಟ್ ಸ್ಲ್ಯಾಬ್‌ನ ರಂಧ್ರ ಕೊರೆಯುವ ಕಾರ್ಯಾಚರಣೆ ಮುಂದುವರಿದಿದೆ. ಮತ್ತೊಂದೆಡೆ ಕಾಂಕ್ರೀಟ್ ಸ್ಲ್ಯಾಬ್ ಮೇಲಿನ ಮಣ್ಣು ಬಿದ್ದ ಸ್ಥಳದಲ್ಲಿಯೂ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಎರಡೂ ಕಡೆಗಳಲ್ಲಿ ಆತನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ತಂಡ ಆತನನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲು ಹರಸಾಹಸವನ್ನೇ ಮಾಡಿದೆ. ರಾತ್ರಿ ಏಳುವರೆ ವೇಳೆಗೆ ಆತನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಚಂದನ್ ಕುಮಾರ್ ಬದುಕಿ ಉಳಿಯಬೇಕೆನ್ನುವುದು ಎಲ್ಲರ ಆಶಯ ಕೊನೆಗೂ ಫಲಿಸಲಿಲ್ಲ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು – ಜನಾರ್ದನ್ ಕೊಡವೂರು ​