ವಾರದ ಬಳಿಕ ಸಿಕ್ಕಿತು ತಿಪಟೂರು ಯುವಕನ ಮೃತದೇಹ; ಬೀಜಾಡಿಯಲ್ಲಿ ಸಮುದ್ರಪಾಲಾಗಿದ್ದ ಯುವಕ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ ಯುವಕನ ಶವ ಇಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತ ಯುವಕನನ್ನು ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್‌. ಯೋಗೀಶ್‌ (23) ಎನ್ನಲಾಗಿದೆ. ಕಳೆದ ಬುಧವಾರ (ಜೂನ್ 19) ರಂದು ಸಂಜೆ 6.45ರ ಸುಮಾರಿಗೆ ಕೋಟೇಶ್ವರ ಸಮೀಪದ ದಾರಸ್‌ ಮನೆ ಸಮೀಪದ ಬೀಚ್‌ಗೆ ಯೋಗೀಶ್‌ ಹಾಗೂ ಸಂದೀಪ್‌ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್‌ ನೀರಿಗಿಳಿದಿದ್ದಾರೆ. ಬುಧವಾರ ಸಂಜೆ ವೇಳೆಗೆ ಮಳೆ ಜಾಸ್ತಿ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. ಅಲೆಯಬ್ಬರಕ್ಕೆ ಯೋಗೀಶ್‌ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್‌ ಅವರು ಯೋಗೀಶ್‌‌ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್‌ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್‌ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್‌, ನಗರ ಠಾಣಾ ಎಸ್‌ಐ ಪ್ರಸಾದ್‌ ಕುಮಾರ್‌ ಹಾಗೂ ಪೊಲೀಸ್‌ ಸಿಬಂದಿ ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿ ಭೇಟಿ ನೀಡಿ, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ರಾತ್ರಿಯಾಗಿದ್ದರಿಂದ ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಯೋಗೀಶ್ ಮೃತದೇಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಘಟನೆ ನಡೆದು ಏಳನೇ ದಿನಕ್ಕೆ ಯೋಗೀಶ್ ಮೃತ ದೇಹ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ