ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ತಾಯಿ ಹಾಗೂ ಸಹೋದರಿಯ ಬಂಧನ

ಮುಲ್ಕಿ: ಪಕ್ಷಿಕೆರೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕಾರ್ತಿಕ್ ಭಟ್ ಎಂಬಾತನ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ಯಾಮಲಾ ಭಟ್ (61) ಹಾಗೂ ಸುರತ್ಕಲ್ ಬಾಳ ನಿವಾಸಿ ಕಣ್ಮಣಿ ರಾವ್ (36) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ವಿರುದ್ಧ ಕಾರ್ತಿಕ್ ಭಟ್‌ನ ಪತ್ನಿಯ ತಾಯಿ ನೀಡಿದ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(32) ತನ್ನ ಪತ್ನಿ ಪ್ರಿಯಾಂಕ(28), ಮಗು ಹೃದಯ್(4) ಅವರನ್ನು ಹತ್ಯೆಗೈದು ತಾನೂ ರೈಲಿನಡಿ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದನು. ಕಾರ್ತಿಕ್ ಭಟ್‌ನ ನಾಲ್ಕು ಪುಟಗಳ ಡೆತ್ ನೋಟ್‌ನಲ್ಲಿ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪ್ರಸ್ತಾಪ ಮಾಡಿ ತಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.

ಕೆಲ ವರ್ಷಗಳ ಹಿಂದೆ ಕಾರ್ತಿಕ್ ಭಟ್‌ನ ಅಕ್ಕ ಕಣ್ಮಣಿ ಹಾಗೂ ಬಾವ ಪಕ್ಷಿಕೆರೆಯ ರೆಸಿಡೆನ್ಸಿಯೊಂದರಲ್ಲಿ ವಾಸವಾಗಿದ್ದರು. ಈ ಅಪಾರ್ಟ್ಮೆಂಟ್‌ನಲ್ಲಿ ಕಣ್ಮಣಿ, ತಂದೆ ಜನಾರ್ದನ್ ಭಟ್ ಹಾಗೂ ತಾಯಿ ಶ್ಯಾಮಲಾ ಜೊತೆಗೆ ಸಹೋದರ ಕಾರ್ತಿಕ್ ಭಟ್ ಹಾಗೂ ಕುಟುಂಬ ವಾಸವಾಗಿದ್ದರು.

ಕಾರ್ತಿಕ್ ಭಟ್ ನೈಜೀರಿಯಾದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸ ಬಿಟ್ಟು ಬಂದ ಬಳಿಕ ಕಾರ್ತಿಕ್ ಭಟ್ ಊರಿನಲ್ಲಿ ಸರಿಯಾದ ಕೆಲಸ ಸಿಗದೆ ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಆನ್ಲೈನ್ ಆಟದಿಂದ ನಷ್ಟ ಅನುಭವಿಸಿದ್ದ ಎಂದು ತಿಳಿದುಬಂದಿದೆ. ಈ ನಡುವೆ ಕಣ್ಮಣಿ ಭಟ್, ಕಾರ್ತಿಕ್ ಭಟ್ ಹಾಗೂ ಆತನ ಪತ್ನಿ ಸಮೇತ ಮನೆಯಿಂದ ಹೊರ ಹಾಕುವ ಯತ್ನದ ಬಗ್ಗೆ ತಾಯಿ ಜೊತೆ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಬೇಸತ್ತ ಕಾರ್ತಿಕ್ ಭಟ್ ಏಕಾಏಕಿ ತನ್ನ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದು, ಡೆತ್ ನೋಟ್ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ