‘ನೈಟ್ ಲೈಫ್’ ಪರಿಕಲ್ಪನೆ ಇಲ್ಲದಿರುವುದೇ ಮಂಗಳೂರಿನ ಶೈಕ್ಷಣಿಕ, ಔದ್ಯೋಗಿಕ ಪ್ರವಾಸೋದ್ಯಮಕ್ಕೆ ಕುತ್ತು – ಎಂಎಲ್‌ಸಿ ಮಂಜುನಾಥ ಭಂಡಾರಿ

ಮಂಗಳೂರು : ಮಂಗಳೂರು ನಗರದಲ್ಲಿ ‘ನೈಟ್ ಲೈಫ್’ನ ಪರಿಕಲ್ಪನೆ ಇಲ್ಲದಿರುವುದೇ ಇಲ್ಲಿನ ಶೈಕ್ಷಣಿಕ, ಔದ್ಯೋಗಿಕ ಪ್ರವಾಸೋದ್ಯಮಕ್ಕೆ ಕುತ್ತಾಗಿ ಪರಿಣಮಿಸುತ್ತಿದೆ ಎಂದು ಎಂಎಲ್‌ಸಿ ಮಂಜುನಾಥ ಭಂಡಾರಿ ಖೇದ ವ್ಯಕ್ತಪಡಿಸಿದರು‌.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾಮರಸ್ಯ, ಸಹಬಾಳ್ವೆ ಇರುವ ದ.ಕ. ಜಿಲ್ಲೆಯಲ್ಲಿ ಸಾಮಾಜಿಕ ಚಟುವಟಿಕೆಗಳು ಹಲವು ವರ್ಷಗಳಿಂದ ಸೀಮಿತಗೊಳ್ಳುತ್ತಾ ಬಂದಿದೆ. ದೇಶದ ಇತರ ಮಹಾನಗರಗಳಲ್ಲಿ ಇರುವಂತಹ ರಾತ್ರಿ ಬದುಕಿನ ಪರಿಕಲ್ಪನೆಯೇ ಇಲ್ಲವಾಗಿದೆ. ಆದ್ದರಿಂದಲೇ ಇಲ್ಲಿ ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಗಂಡು-ಹೆಣ್ಣು ಜೊತೆಯಾಗಿ ಓಡಾಡುವುದು, ಮಾತನಾಡುವುದು, ತಿನ್ನುವುದು ಕಷ್ಟಸಾಧ್ಯ. ಆಹಾರ, ವಸ್ತ್ರಧಾರಣೆಗಳ ಮೇಲಿನ ನಿರ್ಬಂಧ ಹೊರರಾಜ್ಯ, ಹೊರದೇಶಗಳ ವಿದ್ಯಾರ್ಥಿಗಳಿಗೆ ಕಿರಿಕಿರಿಯೆನಿಸಿ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಹಬ್ ಆಗಿರುವ ದ.ಕ. ಜಿಲ್ಲೆಗೆ ಹೊರರಾಜ್ಯಗಳ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ಇದು ಪಿಯುಸಿಗಷ್ಟೇ ಸೀಮಿತವಾಗುತ್ತಿದೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 200ಎಕರೆ ಭೂಮಿಯನ್ನು ಖರೀದಿಸಿರುವ ವಿಪ್ರೋ ಸಂಸ್ಥೆಯವರು ಕಾರ್ಯಚಟುವಟಿಕೆ ಆರಂಭಿಸಲು ಮನಸ್ಸು ಮಾಡುತ್ತಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾದರೂ ಯುವಕರು ಮಂಗಳೂರು ಬದಲು ಬೆಂಗಳೂರು ಅಥವಾ ರಾಜ್ಯಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಆ ಮನಸ್ಥಿತಿಯನ್ನು ಬದಲಾಯಿಸಿ ಇಲ್ಲಿ ಐಟಿ ಕಂಪನಿಗಳು ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸುವ ಜತೆಗೆ ಮುಂದುವರಿದ ರಾಷ್ಟ್ರಗಳ ನಗರಗಳು ಇಲ್ಲಿನ ಸಂಸ್ಕೃತಿ, ಜಾನಪದ ಕ್ರೀಡೆಗಳನ್ನು ಅರಿತು ತಮ್ಮಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಪೂರಕ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಪಾನ್ ಮತ್ತು ಕೊರಿಯಾದ ನಗರಗಳ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುವ ಕಾರ್ಯ ನಡೆಸಿದ್ದಾರೆ.

ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.

ಪಿಲಿಕುಳದಲ್ಲಿ ತುಳುನಾಡೋತ್ಸವ

ಪಿಲಿಕುಳದಲ್ಲಿ ಈಗಾಗಲೇ ಕಳೆದ 10ವರ್ಷಗಳಿಂದ ಸ್ಥಗಿತಗೊಂಡಿರುವ ಕಂಬಳಕ್ಕೆ ಈ ಬಾರಿ ಚಾಲನೆ ನೀಡಲಾಗುತ್ತಿದೆ. ಕಂಬಳ ಮಾತ್ರವಲ್ಲದೆ, ಒಂದು ವಾರ ವಿವಿಧ ಇಲಾಖೆಗಳ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಿಲಿಕುಳದ ಜೈವಿಕ ಉದ್ಯಾನವನ, ಗುತ್ತಿನಮನೆ, ತಾರಾಲಯದ ವೈಭವದ ವೀಕ್ಷಣೆಗೆ ಪ್ರವಾಸಿಗರ ಆಕರ್ಷಣೆಗೆ ಒತ್ತು ನೀಡಲಾಗುವುದು. ಇದಕ್ಕಾಗಿ ಸೆ.11ರಂದು ಬೆಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ನೇತೃತ್ವದಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಂಜುನಾಥ ಭಂಡಾರಿ ವಿವರಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ