ಆನ್‌ಲೈನ್ ವಂಚನೆಗೆ ಒಳಗಾಗಿ ಸೌದಿ ಸೆರೆಮನೆಯಲ್ಲಿದ್ದ ಹಳೆಯಂಗಡಿ ಯುವಕ ಮರಳಿ ತಾಯ್ನಾಡಿಗೆ….!

ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಹಳೆಯಂಗಡಿ ನಿವಾಸಿ ರಹೀಂ ಎಂಬವರು ಆನ್‌ಲೈನ್ ವಂಚಕರ ಬಲೆಗೆ ಸಿಲುಕಿ ಸೌದಿ ಅರೇಬಿಯಾದಲ್ಲಿ ಜೈಲು ಸೇರಿ, ಸಾಮಾಜಿಕ ಕಾರ್ಯಕರ್ತರ ಶ್ರಮದಿಂದ ಅನಿವಾಸಿ ಭಾರತೀಯರೊಬ್ಬರು ಆರೋಪ ಮುಕ್ತರಾಗಿ ವಾಪಸ್‌ ತಾಯ್ನಾಡಿಗೆ ಮರಳಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಸೌದಿ ಅರೇಬಿಯಾದ ತಬೂಕ್ ಎಂಬಲ್ಲಿನ ಗ್ರೀಕ್ ಮೂಲದ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಹೀಂ 2022ರ ನವೆಂಬರ್ 15ರಂದು ಅಪರಿಚಿತ ವ್ಯಕ್ತಿಯೋರ್ವನ ಕರೆ ಸ್ವೀಕರಿಸಿದ್ದರು. ಆತ ಇಖಾಮ(ವಾಸ್ತವ್ಯ ಪರವಾನಿಗೆ) ನವೀಕರಿಸಲಿದ್ದು ಮಾಹಿತಿ ನೀಡುವಂತೆ ಸೂಚಿಸಿದ್ದ. ಅದರಂತೆ ಆತ ಇವರ ಮೊಬೈಲ್ ಫೋನ್‌ಗೆ ಒಟಿಪಿ ಕಳುಹಿಸಿ ಅದನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ.

ರಹೀಂ 2023ರ ಸೆಪ್ಟೆಂಬರ್ 30ರಂದು ಊರಿಗೆ ಬರುವ ವೇಳೆ ವಿಮಾನ ನಿಲ್ದಾಣದಲ್ಲಿ ಅವರನ್ನು ಸೌದಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 17 ಸಾವಿರ ಸೌದಿ ರಿಯಾಲ್ ಅಕ್ರಮವಾಗಿ ವರ್ಗಾಯಿಸಿದ ಆರೋಪದಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಪೊಲೀಸರ ಕಣ್ಣಾವಲಿನಲಿದ್ದರು. ಈ ವಿಚಾರ ಇತ್ತೀಚೆಗೆ ಹಳೆಯಂಗಡಿಯಲ್ಲಿರುವ ತಮ್ಮ ಮನೆಯವರಿಗೆ ತಿಳಿದಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು‌ರವರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು.

ತಕ್ಷಣ ಕಾರ್ಯ ಪ್ರವೃತ್ತರಾದ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತ ಮುಲ್ಕಿ ನಿವಾಸಿ ನೌಫಲ್ ಸಮಾಜ ಸೇವಕ ಹಾಗೂ ವಕೀಲ ಪಿ.ಎ.ಹಮೀದ್ ಪಡುಬಿದ್ರೆ ಸಹಾಯದ ಮೂಲಕ ಕಾನೂನು ಹೋರಾಟ ಮಾಡಿ, ಒಂಭತ್ತು ತಿಂಗಳಿಗೂ ಹೆಚ್ಚು ಅವಧಿಯ ತನಿಖೆಯ ನಂತರ ರಹೀಮ್ ನಿರ್ದೋಷಿ ಎಂದು ಬಿಡುಗಡೆಗೊಳಿಸಿದೆ.

ಜೂ.27ರಂದು ರಹೀಂ ತಾಯ್ನಾಡಿಗೆ ಮರಳಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ರಹೀಂ, ಅಪರಿಚಿತ ಕರೆಗಳು ಬಂದಾಗ ಯಾವುದೇ ರೀತಿಯ ಖಾಸಗಿ ಮಾಹಿತಿಯನ್ನು ನೀಡದೆ ಜಾಗರೂಕರಾಗಬೇಕು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಲಸಿಗರಿಗೂ ಈ ಘಟನೆ ಸಂಪೂರ್ಣ ಎಚ್ಚರಿಕೆಯಾಗಲಿ ಎಂದು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಮಾತನಾಡಿ ಕಷ್ಟಪಟ್ಟು ಲಕ್ಷಾಂತರ ರೂ. ಖರ್ಚು ಮಾಡಿ ವಿದೇಶಗಳಿಗೆ ಹೋಗುತ್ತಾರೆ. ಹಾಗಿರುವಾಗ ವಿಶ್ವದಲ್ಲೇ ವಿವಿಧ ರೀತಿಯ ಆನ್‌ಲೈನ್ ವಂಚನೆಗಳು ನಡೆಯುತ್ತಿವೆ. ಹಾಗಾಗಿ ಅನಿವಾಸಿ ಭಾರತೀಯರು ಮತ್ತು ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಕಷ್ಟಪಟ್ಟು ಶ್ರಮಿಸಿ ತಾನು ಕುಟುಂಬವನ್ನು ಸೇರಲು ಅವಕಾಶ ಮಾಡಿಕೊಟ್ಟ ಸಮಾಜ ಸೇವಕರಾದ ವಕೀಲ ಪಿ.ಎ.ಹಮೀದ್ ಪಡುಬಿದ್ರೆ, ನೌಫಲ್ ಮುಲ್ಕಿ ಮತ್ತು ಅದ್ದಿ ಬೊಳ್ಳೂರು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸಚಿವ ಜಾರಕಿಹೊಳಿ ಅವರಿಂದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ