ಮದ್ಯದ ನಶೆಯಲ್ಲಿ ಹಾವು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ವಿಟ್ಲ : ಕುಡಿತದ ಮತ್ತಿನಲ್ಲಿ ಹಾವು ಹಿಡಿಯಲು ಹೋದ ಯುವಕನ ಕೈಗೆ ಹಾವು ಕಚ್ಚಿದ ಘಟನೆ ವಿಟ್ಲ ಸಮೀಪ ನಡೆದಿದೆ. ಹಾವು ಕಡಿದು ಕೈಯಲ್ಲಿ ರಕ್ತ ಸೋರುತ್ತಿದ್ದರೂ ಯುವಕನ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಬೇಜವಾಬ್ದಾರಿಯಿಂದಾಗಿ ಬಡಕುಟುಂಬದ ಯುವಕ ಸಾವನ್ನಪ್ಪಿದ್ದಾನೆ.

ವಿಟ್ಲ ಸಮೀಪದ ಮಂಗಲಪದವು ನವಗ್ರಾಮದ ಅಬ್ಬು ಎಂಬವರ ಮನೆ ಪರಿಸರದಲ್ಲಿ ನಾಗರಹಾವು ಬಂದಿದೆ. ಹಾವನ್ನು ಕಂಡ ಸ್ಥಳೀಯರು ಬೊಬ್ಬೆ ಹೊಡೆಯುತ್ತಿದ್ದಂತೆ ಪಕ್ಕದ ಮನೆಯಲ್ಲಿದ್ದ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ ಬಂದಿದ್ದಾನೆ. ಮದ್ಯದ ನಶೆಯಲ್ಲಿದ್ದ ಆತ ಹಾವನ್ನು ಹಿಡಿಯುತ್ತೇನೆಂದು ಕೈ ಹಾಕುತ್ತಿದ್ದಂತೆ ಹಾವು ಮೂರ್ನಾಲ್ಕು ಬಾರಿ ಕಡಿದು ಪರಾರಿಯಾಗಿದೆ.

ಹಾವು ಕಡಿದು ಸುರೇಶ್ ನಾಯ್ಕನ ಕೈಯಲ್ಲಿ ರಕ್ತ ಸೋರುತ್ತಿದ್ಜರೂ ಆತನಾಗಲೀ, ಸ್ಥಳೀಯರಾಗಲೀ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಗಾಯಾಳು ಸುರೇಶ್ ನಾಯ್ಕ ಪೆರುವಾಯಿ ನಿವಾಸಿಯಾಗಿದ್ದರೂ ನವಗ್ರಾಮದಲ್ಲಿರುವ ಆತನ ಚಿಕ್ಕಮ್ಮನ ಮನೆಯಲ್ಲಿ ಕೆಲಸಮಯಗಳಿಂದ ವಾಸಿಸುತ್ತಿದ್ದನು. ರಕ್ತ ಸೋರುತ್ತಿರುವ ಸುರೇಶ್ ನಾಯ್ಕ ಮದ್ಯದ ನಶೆಯಲ್ಲಿ ಚಿಕ್ಕಮ್ಮನ ಮನೆಯಲ್ಲಿ ಹಾಯಾಗಿ ಮಲಗಿದ್ದಾನೆ. ಕೆಲ ಹೊತ್ತಿನಲ್ಲೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ.

ಸಂಜೆ ಈ ವಿಚಾರ ತಿಳಿದ ವಿಟ್ಲದ ಕೆಲ ಯುವಕರು ಸ್ಥಳಕ್ಕೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇದೀಗ ಪೆರುವಾಯಿಯಲ್ಲಿರುವ ಆತನ ಮನೆಯವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ