ಉಡುಪಿ : ಹೂಡೆ ಸಮುದ್ರ ತೀರದಲ್ಲಿ ಪ್ರವಾಸಿಗನೊಬ್ಬ ಕಡಲ ಅಲೆಗಳ ಅಬ್ಬರಕ್ಕೆ ತತ್ತರಿಸಿ ಕೊಚ್ಚಿ ಹೋದ ಭಯಾನಕ ಘಟನೆ ಸಂಭವಿಸಿದೆ.
ಜಿಲ್ಲೆಯ ಹೊರಗಿನಿಂದ ಬಂದಿದ್ದ ಪ್ರವಾಸಿಗ, ಮೋಜು ಮಸ್ತಿಗಾಗಿ ಹೂಡೆ ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದಾಗ ಕಡಲಿನ ಅಲೆಗಳ ಅಬ್ಬರದ ಹೊಡೆತಕ್ಕೆ ತತ್ತರಿಸಿದ್ದಾನೆ. ಕಡಲಿನ ಅಬ್ಬರದ ನಡುವೆ ತೇಲಿ ಹೋದ ಪ್ರವಾಸಿಗ, ಸಮುದ್ರದಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ಸಮುದ್ರಕ್ಕೆ ಧಾವಿಸಿ, ಪ್ರವಾಸಿಗನನ್ನು ರಕ್ಷಿಸಿದರು.
ತೀವ್ರ ಅಲೆಗಳ ನಡುವೆ ಸೆಣಿದು, ಪ್ರಾಣದ ಹಂಗು ತೊರೆದು ಪ್ರವಾಸಿಗನ ರಕ್ಷಣೆ ಮಾಡಿದ ಸ್ಥಳೀಯರು, ಪ್ರಶಂಸನೀಯ ಕಾರ್ಯ ಮಾಡಿದ್ದಾರೆ.
ಈ ಘಟನೆಯು ಹೊರಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಎಚ್ಚರಿಕೆ ಗಂಟೆಯಾಗಿದೆ. ಸಮುದ್ರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ, ಪ್ರವಾಸಿಗರು ಹೆಚ್ಚಿನ ಎಚ್ಚರಿಕೆಯೊಂದಿಗೆ ನಡೆದುಕೊಳ್ಳುವ ಅಗತ್ಯವಿದೆ.