ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ವಿದ್ವಾಂಸ

ಉಡುಪಿ : ನಿನ್ನೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಹದೊಂದಿಗೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದ ದ್ವೈತ ಸಿದ್ಧಾಂತ ಮೇರು ವಿದ್ವಾಂಸರೂ, ಪ್ರಚನಕಾರರೂ ಲೇಖಕರೂ ಕೃಷ್ಣ ಮಠ ಅಷ್ಟಮಠಗಳ ಆಸ್ಥಾನ ವಿದ್ವಾಂಸರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇಂದು ಶನಿವಾರ ಬೆಳಿಗ್ಗೆ ನಿಧನಹೊಂದಿದ್ದಾರೆ. ಅವರಿಗೆ 72 ವರ್ಷ ಪ್ರಾಯವಾಗಿತ್ತು

ವಿದ್ವಾಂಸರ ಮನೆತನದಲ್ಲೇ ಜನಿಸಿದ್ದ ಉಪಾಧ್ಯಾಯರು ಸಂಪ್ರದಾಯ ನಿಷ್ಠೆ ಹಾಗೂ ವಿಪ್ರವಿಹಿತ ಕರ್ಮಾನುಷ್ಠಾನಗಳಲ್ಲಿ ಅಪಾರ ಶ್ರದ್ಧೆ ಹೊಂದಿದ್ದು ಜೀವನಪರ್ಯಂತ ಅವುಗಳನ್ನು ಪಾಲಿಸಿಕೊಂಡು ಬಂದಿದ್ದರು.

ಉಡುಪಿಯ ಪ್ರಸಿದ್ಧ ಶ್ರೀ ಮನ್ಮಧ್ವ ಸಿದ್ಧಾಂತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಅವಧಿ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಅನೇಕ ಮಠಗಳಿಂದ ಪ್ರಕಟವಾಗುತ್ತಿದ್ದ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಅನೇಕ ಮಾಸಪತ್ರಿಕೆಗಳಲ್ಲಿ ನಿರಂತರ ಅಧ್ಯಾತ್ಮಿಕ ಚಿಂತನ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದರು. ಪ್ರವಚನ‌ಕುಶಲಿಗಳೂ ಆಗಿದ್ಸು ದ್ವೈತ ವೇದಾಂತ ಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರ ಮಹತ್ವದ ಕೊಂಡಿಯಾಗಿದ್ದರು.

ಶ್ರೀಯುತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ.
ಶ್ರೀಯುತ ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪಲಿಮಾರು ಮತ್ತು ಅದಮಾರು ಉಭಯ ಶ್ರೀಗಳು, ಪೇಜಾವರ ಕಾಣಿಯೂರು ಸೋದೆ ಶೀರೂರು ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರ ಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳುಶಿವಳ್ಳಿಬ್ರಾಹಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ, ಮಾಜಿ ಶಾಸಕ ಕೆ ರಘುಪತಿ ಭಟ್, ಶಾಸಕ ಯಶ್ಪಾಲ್ ಸುವರ್ಣ ಹೀಗೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ