ತುಳು ಲಿಪಿ ಕಲಿಸುತ್ತಿರುವ ಶಿಕ್ಷಕರಿಗೆ ಗೌರವ ಧನ ನೀಡಲು ಸರಕಾರಕ್ಕೆ ಪ್ರಸ್ತಾವನೆ – ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ

ಉಡುಪಿ : ಅವಿಭಜಿತ ದಕ ಜಿಲ್ಲೆಯ 40 ಶಾಲೆಗಳಲ್ಲಿ ತುಳು ಕಲಿಸುತ್ತಿರುವ ಶಿಕ್ಷಕರನ್ನೂ ಉರ್ದು, ಫ್ರೆಂಚ್ ಮತ್ತಿತರ ಭಾಷಾ ಶಿಕ್ಷಕರಂತೆ, ಅತಿಥಿ ಶಿಕ್ಷಕರ ಪಟ್ಟಿಗೆ ಸೇರಿಸಿ ಗೌರವ ಧನ ನೀಡಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.

ಪ್ರಸ್ತುತ ತುಳು ಶಿಕ್ಷಕರಿಗೆ ತುಳು ಅಕಾಡೆಮಿಯಿಂದಲೇ ಗೌರವಧನ ನೀಡಲಾಗುತ್ತಿದೆ. ಈ ಶಿಕ್ಷಕರಿಗೆ ಬಾಕಿ 12.50 ಲಕ್ಷ ರು. ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದವರು ಹೇಳಿದರು. ತುಳು ಭಾಷೆಗೆ ಮುಂದಿನ ಅಧಿವೇಶನದಲ್ಲಿ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆಯ ಸಿಹಿಸುದ್ದಿಯ ನಿರೀಕ್ಷೆ ಇದೆ, ಜೊತೆಗೆ ತುಳು ಭಾಷೆಯನ್ನು ಯೂನಿಕೋಡ್‌ನಲ್ಲಿ ಬಳಸುವ ವ್ಯವಸ್ಥೆ ಕೂಡ ಆಗುತ್ತಿದೆ ಎಂದವರು ಹೇಳಿದರು. ತುಳು ಭಾಷೆಗಾಗಿ ಹೋರಾಟವನ್ನೇ ನಡೆಸಿದ್ದ ಯು.ಎಸ್. ಪಣಿಯಾಡಿ ಅವರನ್ನು ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿ, ದತ್ತಿನಿಧಿ, ಪೀಠ ಇತ್ಯಾದಿಗಳ ಮೂಲಕ ಗುರುತಿಸಬೇಕಾಗಿದೆ. ಈ ಬಗ್ಗೆ ಅಕಾಡೆಮಿಯಲ್ಲಿಯೂ ಯೋಚಿಸಲಾಗುತ್ತದೆ ಎಂದವರು ಭರವಸೆ ನೀಡಿದರು.

ಇದೇ ಸಂಧರ್ಭದಲ್ಲಿ ಅವರು ಪ್ರಶಸ್ತಿ ವಿಜೇತ ‘ಪಮ್ಮಕ್ಕೆನ ಪೊರುಂಬಾಟ’ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಸಾಹಿತಿ ಅಮಿತಾಂಜಲಿ ಕಿರಣ್ ಅವರು ಪ್ರಶಸ್ತಿ ವಿಜೇತ ಕೃತಿಯನ್ನು ಪರಿಚಯಿಸಿದರು. ಮಂಗಳೂರಿನ ತುಳು ಸಾಹಿತಿ ರೂಪಕಲಾ ಆಳ್ವ ಅವರಿಗೆ ಈ ಸಾಲಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಲ್ಲದೇ ಎಸ್ಎಸ್ಎಲ್‌ಸಿ ಪರೀಕ್ಷೆಯ ತುಳುಪಠ್ಯದಲ್ಲಿ ಶೇ 100 ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತೀರ್ಪುಗಾರರಾದ ವಿಮರ್ಷಕ ಮುರಳಿಧರ ಉಪಾಧ್ಯಾಯ ಹಿರಿಯಡ್ಕ ಮತ್ತು ಸಾಹಿತಿ ಪುತ್ತಿಗೆ ಪದ್ಮನಾಭ ರೈ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಸಂಗೀತ ನಿರ್ದೇಶಕ ವಿ.ಮನೋಹರ್, ಉದ್ಯಮಿ ವೈ. ಸುಧೀರ್ ಕುಮಾರ್, ಕೊಡುಗೈ ದಾನಿ ಯು. ವಿಶ್ವನಾಥ ಶೆಣೈ ಆಗಮಿಸಿದ್ದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿದ್ದರು.
ಪ್ರಶಸ್ತಿ ಸಮಿತಿ ಸಂಚಾಲಕ ತಾರಾ ಉಮೇಶ್ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ರತ್ನಾಕರ ಇಂದ್ರಾಳಿ ಕಾರ್ಯಕ್ರಮ ಸಂಯೋಜಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ