ವೆನ್ಲಾಕ್‌ನ ಪಾರದರ್ಶಕ ವ್ಯವಸ್ಥೆಗೆ ಪೋರ್ಟಲ್; ಎಂಫ್ರೆಂಡ್ಸ್‌ನ ಕಾರುಣ್ಯ – ಕ್ಲಾಸ್ ಆನ್ ವ್ಹೀಲ್ ಕಾರ್ಯಕ್ರಮದಲ್ಲಿ ಡಿಸಿ ಮುಲ್ಲೈ ಮುಗಿಲನ್

ಮಂಗಳೂರು : ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ 176 ವರ್ಷಗಳ ಇತಿಹಾಸವಿದ್ದು, ರಾಜ್ಯಾದ್ಯಂತ ನಂಬಿಕೆ ಉಳಿಸಿಕೊಂಡಿದೆ. ಇಲ್ಲಿಯ ವಾತಾವರಣ, ಗುಣಮಟ್ಟದ ಸೇವೆ ಕಾಪಾಡುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಪಾರದರ್ಶಕ ವ್ಯವಸ್ಥೆಗಾಗಿ ಹೊಸ ಪೋರ್ಟಲ್ ಬಿಡುಗಡೆ ಮಾಡಲಿದ್ದೇವೆ ಎಂದು ದ.ಕ. ಜಿಲ್ಲಾಕಾಧಿರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.

ನಗರದ ವೆನ್ಲಾಕ್ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಮಂಗಳೂರಿನ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಯ ಏಳನೇ ಮತ್ತು ಪುತ್ತೂರಿನಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಕ್ಲಾಸ್ ಆನ್ ವ್ಹೀಲ್ ಯೋಜನೆಯ ಪ್ರಥಮ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವೆನ್ಲಾಕ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಸ್ಥಳಾಂತರ ಸೇರಿದಂತೆ ಸೇವೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಸಹಕಾರ ನೀಡುತ್ತಿದ್ದಾರೆ. ಇಲ್ಲಿಯ ರೋಗಿಗಳ ಸಹವರ್ತಿಗಳ ಹಸಿವನ್ನು ಮನಗಂಡು ಕಾರುಣ್ಯ ಯೋಜನೆ ಆರಂಭಿಸಿರುವುದು ಮತ್ತು ಸರಕಾರಿ ಶಾಲೆಗಳ ಮಕ್ಕಳೂ ಕಂಪ್ಯೂಟರ್ ಕಲಿಯಲೆಂದು ಎಂಫ್ರೆಂಡ್ಸ್ ಸೇವೆ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಇದು ನಮ್ಮ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ಅವರು ಹೇಳಿದರು.

ಎಂಫ್ರೆಂಡ್ಸ್ ಟ್ರಸ್ಟ್ ಚೇರ್‌ಮ್ಯಾನ್ ಝಕರಿಯಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ, ನನಗೆ ಎರಡು ಸಾವಿರ ರೂ. ವೇತನ ಇದ್ದಾಗಲೂ 10 ರೂ. ದಾನ ಮಾಡುತ್ತಿದ್ದೆ. ಮಾಡಿದ ದಾನ ಎಲ್ಲೂ ಹೋಗುವುದಿಲ್ಲ. ಜನರು ಊಟ ಮಾಡಿ ತೇಗುವುದೇ ನಮಗೆ ಸಿಗುವ ಆಶೀರ್ವಾದ. ಮನಸ್ಸಾರೆ ದಾನ ಮಾಡಿದರೆ ನಮ್ಮ ಸಂಪತ್ತು ವೃದ್ಧಿಯಾಗುತ್ತದೆ ವಿನಃ ಖಾಲಿಯಾಗುವುದಿಲ್ಲ ಎನ್ನುವುದಕ್ಕೆ ನಾನೇ ಉದಾಹರಣೆ ಎಂದರು.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಡಿ.ಎಸ್. ಶಿವಪ್ರಕಾಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು.

ಕಾರುಣ್ಯ ಯೋಜನೆಗೆ ಜನವರಿ ತಿಂಗಳ ವೆಚ್ಚ 2.25 ಲಕ್ಷ ರೂ. ದೇಣಿಗೆ ನೀಡಿದ ದುಬಾಯಿಯ ಬ್ಲೂ ರೋಯಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಮತ್ತು ಚೇರ್‌ಮ್ಯಾನ್ ಝಕರಿಯಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಕಾರುಣ್ಯ ಯೋಜನೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎಚ್. ಇಬ್ರಾಹೀಂ ಮತ್ತು ಮನ್ಸೂರ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಶುಭ ಹಾರೈಸಿದರು.

ಎಂಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮುಹಮ್ಮದ್ ಸ್ವಾಗತಿಸಿದರು. ಕಾರುಣ್ಯ ಯೋಜನೆಯ ಮುಖ್ಯಸ್ಥ ಮುಹಮ್ಮದ್ ಹನೀಫ್ ಗೋಳ್ತಮಜಲು ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಕ್ಲಾಸ್ ಆನ್ ವ್ಹೀಲ್ ಯೋಜನೆ ಮುಖ್ಯಸ್ಥ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಜೀವನಪೂರ್ತಿ ಕೊಡುಗೆ

ಕ್ಲಾಸ್ ಆನ್ ವ್ಹೀಲ್ ಯೋಜನೆಯ ನಿರ್ವಹಣೆಗೆ ಮಾಸಿಕ ಒಂದು ಲಕ್ಷ ರೂ. ಬೇಕಾಗುತ್ತದೆ. ದಾನಿಗಳ ನೆರವಿನಿಂದ ಅದನ್ನು ಭರಿಸಲಾಗುತ್ತದೆ. ಮುಂದೆ ಜೀವನಪೂರ್ತಿ ತಾನು ಕೊಡುಗೆ ನೀಡುವುದಾಗಿ ಝಕರಿಯಾ ಜೋಕಟ್ಟೆ ಘೋಷಿಸಿದರು. ಅದರ ಲಾಂಛನ ಬಿಡುಗಡೆ ಮಾಡಲಾಯಿತು.

Related posts

ಏತ ನೀರಾವರಿ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಂದ ಆಗ್ರಹ : ಸಭೆಯಲ್ಲಿ ಮಾತಿನ ಚಕಮಕಿ – ಶಾಸಕರ ಮಧ್ಯ ಪ್ರವೇಶದಲ್ಲಿ ಸುಖಾಂತ್ಯ

ಸಾದ್ವಿ ಸರಸ್ವತಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ, ದೇವರ ದರ್ಶನ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಫೆಬ್ರವರಿ 2025‌ರಲ್ಲಿ ನಡೆಯಲಿರುವ ಮಣಿಪಾಲ ವಾಣಿಜ್ಯೋದ್ಯಮ ಶೃಂಗಸಭೆಯ (MES) ಎಂಟನೇ ಆವೃತ್ತಿಯನ್ನು ಹೆಮ್ಮೆಯಿಂದ ಪ್ರಕಟಿಸಿದೆ.