ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಮನವಿ

ಉಡುಪಿ : ಕುಂದಾಪುರದ ಗುಲ್ವಾಡಿ ಹೊಳೆ ಬದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ ಅತೀ ಸೂಕ್ಷ್ಮ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಮೇಲೆ ಸ್ಥಳೀಯ ಗೂಂಡಾಗಳು ಏಕಾಏಕಿ ಮನೆಗೆ ನುಗ್ಗಿ ಹೆಂಗಸು ಮಕ್ಕಳೆಂದು ನೋಡದೆ ಎಲ್ಲರ ಮೇಲೂ ಆಯುಧಗಳ ಮೂಲಕ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ. ಮಾತ್ರವಲ್ಲ, ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದವರ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಸೇರಿ ಇತರ ಪ್ರಕರಣದಡಿ ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ.

ಕುಂದಾಪುರದ ಗುಲ್ವಾಡಿ ಹೊಳೆಯಲ್ಲಿ ಬೆಳಗ್ಗೆ ಸುಮಾರು 10-30ರ ಹೊತ್ತಿಗೆ ಮೀನು ಹಿಡಿದು ತಮ್ಮ ಬಲೆಯಿಂದ ಮೀನು ಬಿಡಿಸುತ್ತಿದ್ದ ವೇಳೆ ಶಿಳ್ಳೆಕ್ಯಾತ ಸಮುದಾಯದ ಗುಡಿಸಲಿಗೆ ಮಾರಕಾಯುಧಗಳೊಂದಿಗೆ ನುಗ್ಗಿ ಅಲ್ಲಿದ್ದ ಅಲೆಮಾರಿ ಸಮುದಾಯದ ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಾಮೂಹಿಕವಾಗಿ ದೊಣ್ಣೆಗಳ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೂ ರಕ್ತ ಬರುವಷ್ಟರ ಮಟ್ಟಿಗೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಕರಿಮಣಿಯನ್ನು ಕಿತ್ತುಕೊಂಡು ಎಳೆದಾಡಿದ್ದಾರೆ. ಅಷ್ಟೇ ಅಲ್ಲದೆ ಜಾತಿ ನಿಂಧನೆಗೊಳಪಡಿಸಿ ಊರು ಬೀಡಬೇಕೆಂದು ಜೀವಬೆದರಿಕೆ ಒಡ್ಡಿರುತ್ತಾರೆ. ಕನಿಷ್ಟ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುವ ಅವರ ಗುಡಿಸಲುಗಳನ್ನು ದ್ವಂಸ ಮಾಡಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಅದೇ ದಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ ಹಿನ್ನಲೆಯಲ್ಲಿ ಅದೇ ದಿನ ಎಫ್ಐಆರ್ ದಾಖಲಾಗಿದೆ. ಆದರೆ ಈವರೆಗೂ ಹಲ್ಲೆಗೈದ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ. ಪೊಲೀಸ್ ಇಲಾಖೆಯ ಈ ರೀತಿಯ ಬಡಜನ ವಿರೋಧಿ ನಡೆ ಬಹಳಷ್ಟು ಬೇಸರವನ್ನು ತರಿಸಿದೆ ಮತ್ತು ಪೊಲೀಸ್ ಇಲಾಖೆಯ ಮೇಲಿದ್ದ ಭರವಸೆ ಎಲ್ಲವೂ ಕಳೆದುಕೊಳ್ಳುವಂತಾಗಿದೆ.

ಆದ್ದರಿಂದ ತಾವುಗಳು ದಯವಿಟ್ಟು ನಮ್ಮ ಮೇಲೆ ದಾಳಿಗೈದ ತಪ್ಪಿತಸ್ತ ಆರೋಪಿಗಳನ್ನು ಕೂಡಲೇ ಬಂಧಿಸಲು ಕ್ರಮಕೈಗೊಳ್ಳಬೇಕು ಹಾಗೂ ಶಿಳ್ಳೆಕ್ಯಾತ ಸಮುದಾಯಗಳು ಬದುಕುತ್ತಿರುವ ಗುಡಿಸಲುಗಳಿಗೆ ಕೆಲವೊಂದು ಸ್ಥಳೀಯರಿಂದ ನಡೆಯುವ ದಬ್ಬಾಳಿಕೆಯನ್ನು ನಿಯಂತ್ರಿಸಿ ರಕ್ಷಣೆ ಒದಗಿಸಲು ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಶಿಳ್ಳೆಕ್ಯಾತ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar