ಗೋವಾದ ಬ್ರಾಹ್ಮಿ ಶಾಸನದಲ್ಲಿ ಹೊಸ ರಾಜಮನೆತನ ಬೆಳಕಿಗೆ

ಮಂಗಳೂರು : ಗೋವಾ ರಾಜ್ಯದ ಉತ್ತರ ಗೋವಾದ ಸತ್ತಾರಿ ತಾಲೂಕಿನ ಸತ್ತಾರಿ ಸಮೀಪ ಇರುವ ಪರ್ಯೆಯ ಪಾಳು ಬಿದ್ದಿರುವ ಭೂಮಿಕಾದೇವಿ ದೇವಾಲಯದ ಎದರು ಒಂದು ಕಲ್ಲಿನ ಸ್ಥಂಭವೊಂದನ್ನು ನಿಲ್ಲಿಸಲಾಗಿದ್ದು ಆ ಸ್ಥಂಭದ ಮೇಲೆ ಬ್ರಾಹ್ಮಿಲಿಪಿಯ ಶಾಸನವೊಂದು ಇತ್ತೀಚಿಗೆ ಪುರಾತತ್ವ ಅನ್ವೇಷಣೆಯನ್ನು ಕೈಗೊಂಡ ಸಂದರ್ಭದಲ್ಲಿ ಕಂಡುಬಂದಿತು. ಈ ಶಾಸನವನ್ನು ಬ್ರಾಹ್ಮಿಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಕೇವಲ ಎರಡು ಸಾಲಿನ ಈ ಶಾಸನ ಗೋವಾದ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನದಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇತಿಹಾಸ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್‌ಸಿಂಗ್ ರಾವ್ ರಾಣೆಯವರು 1993ರಲ್ಲಿ ಈ ಶಾಸನವನ್ನು ಗುರುತಿಸಿ, ಗೋವಾ ರಾಜ್ಯದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಪಿ.ಪಿ. ಶಿರೋಡ್ಕರ್‌ರವರ ಗಮನಕ್ಕೆ ತಂದಿದ್ದರು. ಆ ಶಾಸನವನ್ನು ಅಧ್ಯಯನ ಮಾಡಿದ ಶಿರೋಡ್ಕರ್‌ರವರು ಅವೈಜ್ಞಾನಿಕ ಶಾಸನ ಪಡಿಯಚ್ಚಿನಿಂದಾಗಿ ಆ ಸ್ಥಂಭದ ಮೇಲೆ ಕೊರೆಯಲಾಗಿದ್ದ ಎಲ್ಲಾ ಅಕ್ಷರಗಳನ್ನು ಗುರುತಿಸಲು ಸಾದ್ಯವಾಗದೆ ಅಪೂರ್ಣ ಪಠ್ಯವೊಂದನ್ನು ಗೋವಾದ ಸ್ಥಳೀಯ ನವೆ ಪರ್ವ ಎಂಬ ಪತ್ರಿಕೆಯಲ್ಲಿ ಒಂದು ಕಿರು ಬರಹವನ್ನು ಪ್ರಕಟಿಸಿದ್ದರು. ಅವರ ಓದಿನ ಪಠ್ಯವನ್ನು ಶಾಸನದೊಂದಿಗೆ ಮರು ಪರಿಶೀಲಿಸಿದಾಗ ಅದು ಸಂಪೂರ್ಣ ದೋಷಪೂರಿತವಾಗಿದೆ ಎಂದು ಕಂಡುಬಂದಿತು ಎಂದು ಅವರು ಹೇಳಿದ್ದಾರೆ.

ಶಾಸನದ ಮಹತ್ವ :

ಶಾಸನದ ಮರುಪರಿಶೀಲನೆಯಿಂದ, ಪ್ರಾಚೀನ ಕಾಲದಲ್ಲಿ ಗೋವಾವನ್ನು ಆಳ್ವಿಕೆ ಮಾಡಿದ ಹೈಹಯ ಎಂಬ ಒಂದು ಹೊಸ ರಾಜಮನೆತನ ಬೆಳಕಿಗೆ ಬಂದಿತು. ಶಾಸನದ ಪ್ರಕಾರ ಧರ್ಮಯಜ್ಞೋ ಎಂಬ ಹೆಸರಿನ ಹೈಹಯ ದೊರೆ ತನ್ನ ಸೈನ್ಯದೊಂದಿಗೆ ಒಂದು ಯಜ್ಞವನ್ನು ನಡೆಸಿದ ಅಪೂರ್ವ ಮಾಹಿತಿಯನ್ನು ಶಾಸನ ಒಳಗೊಂಡಿದೆ ಹಾಗೂ ಶಾಸನೋಕ್ತ ಈ ಸ್ಥಂಭವೇ ಯೂಪಸ್ಥಂಭವಾಗಿದೆ. ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 4 ಅಥವಾ 5 ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಪರ್ಯೆ ಭೂಮಿಕಾ ದೇವಾಲಯದ ಪ್ರಾಚೀನತೆಯ ಅಧ್ಯಯನ ದೃಷ್ಠಿಯಿಂದ ಈ ಶಾಸನ ಬಹಳ ಮುಖ್ಯ ದಾಖಲೆಯಾಗಿದೆ ಎಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.

ಹೈಹಯರು ಯಾರು?

ಹೈಹಯರು, ಭಾರತದ ಪುರಾಣಗಳು ಹಾಗೂ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಉಲ್ಲೇಖಿತವಾಗಿರುವ ಐದು ಕುಲಗಳನ್ನು ಒಳಗೊಂಡಿರುವ ಪ್ರಾಚೀನವಾದ ಒಂದು ಒಕ್ಕೂಟ. ವಿತಿಹೋತ್ರ, ಶರ್ಯತ, ಭೋಜ, ಆವಂತಿ ತುಂಡಿಕೇರ ಎಂಬ ಐದು ಹೈಹಯ ಕುಲಗಳನ್ನು ಪುರಾಣಗಳಲ್ಲಿ ಹೆಸರಿಸಲಾಗಿದೆ. ಭೋಜರು ಗೋವಾದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಇತರೆ ಐತಿಹಾಸಿಕ ದಾಖಲೆಗಳಿವೆ.

ಈ ಶಾಸನಾಧ್ಯಯನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಶಕರಾದ ಡಾ. ಮುನಿರತ್ನಂ ರೆಡ್ಡಿ ಅವರಿಗೂ, ಗೋವಾದಲ್ಲಿನ ಪುರಾತತ್ವ ಸರ್ವೇಕ್ಷಣೆಯಲ್ಲಿ ಸಹಕರಿಸಿದ ಡಾ. ರಾಜೇಂದ್ರ ಕೇರ್ಕರ್, ವಿಠೋಭ ಗಾವಡೆ, ಚಂದ್ರಕಾಂತ್ ಔಖಲೆ, ಅಮೈ ಕಿಂಜ್ವಾಡೇಕರ್ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ