ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣ ಆರೋಪಿ ಹಾಗೂ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಖದೀಮ ಪೊಲೀಸ್ ಬಲೆಗೆ

ಮಂಗಳೂರು : ಮಹಿಳೆಯರನ್ನು ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ಬಳಿಕ ಸ್ನೇಹ ಬೆಳೆಸಿ ನಾಟಕವಾಡಿ ಅವರೊಂದಿಗೆ ಸಂಪರ್ಕ ಸಾಧಿಸಿ ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ ಹಾಗೂ ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಬೆಳ್ಮಣ್ಣಿನ ರೋಹಿತ್‌ ಮಥಾಯಿಸ್‌ (33) ಬಂಧಿತ ಆರೋಪಿ. ಈತ 2021ರಲ್ಲಿ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು.

ರೋಹಿತ್‌ ಮಥಾಯಿಸ್‌ 2019ರಲ್ಲಿ ಬೆಳ್ಮಣ್ಣಿನಲ್ಲಿ ನೆರೆಮನೆಯವರಾದ ನಿವೃತ್ತ ಪಿಡಿಒ ಭರತಲಕ್ಷ್ಮೀ ಅವರನ್ನು ಇತರರೊಂದಿಗೆ ಸೇರಿಕೊಂಡು ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ದೇಹವನ್ನು ಬಾವಿಗೆ ಹಾಕಿದ್ದ. ಜೈಲುವಾಸ ಅನುಭವಿಸಿ ಅನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಆರೋಪಿ ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ಮಹಿಳೆಯರ ಗೆಳೆತನ ಮಾಡಿ ವಿಶ್ವಾಸಗಳಿಸುತ್ತಿದ್ದ. ಇದೇ ರೀತಿ ಕುಲಶೇಖರದ ಮಹಿಳೆಯ ಸಂಪರ್ಕವೂ ಅಗಿ ಆಕೆಯ ಜತೆ ವಾಸವಿದ್ದು, ಕಳವು ಮಾಡಿಕೊಂಡು ಹೋಗಿದ್ದ.

ಆರೋಪಿ ರೋಹಿತ್‌ ಕಳವಿನ ಬಳಿಕ ಮುಂಬಯಿಗೆ ತೆರಳಿದ್ದ. ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಲು ಯೋಜನೆ ರೂಪಿಸಿಕೊಂಡಿದ್ದ. ಓರ್ವ ಮಹಿಳೆ ಈತನ ಬಲೆಗೆ ಬಿದ್ದಿದ್ದಳು. ಅನಂತರ ಆಕೆಗೆ ಸಂಶಯ ಬಂದಿತ್ತು. ಆಕೆಯ ಮೂಲಕವೇ ಉಪಾಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !